ಚಿಕ್ಕೋಡಿ: ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಹಿರಾ ಶುಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರೂ ಆಗಿರುವ ಎಂಜಿನಿಯರ್ ಎಸ್.ಸಿ.ಕಮತೆ ಅವರು, ತಾಲ್ಲೂಕಿನ ಹತ್ತರವಾಟ ಗ್ರಾಮದಲ್ಲಿ ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಎರಡು ಸಣ್ಣ ಕೆರೆಗಳು ಈಗ 50ಕ್ಕೂ ಅಧಿಕ ರೈತ ಕುಟುಂಬಗಳಿಗೆ ಆಸರೆಯಾಗಿವೆ.
ತಾಂತ್ರಿಕ ಕ್ಷೇತ್ರದಲ್ಲಿ ಇದ್ದರೂ ಕಮತೆ ಅವರಿಗೆ ಕೃಷಿಯತ್ತ ಸೆಳೆತವಿತ್ತು. ಇದೇ ಕಾರಣಕ್ಕೆ ಮಳೆಗಾಲದಲ್ಲಿ ಬೆಟ್ಟದಿಂದ ಇಳಿಜಾರಿನ ಪ್ರದೇಶಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ಹಿಡಿದಿಟ್ಟುಕೊಂಡು, 2014ರಲ್ಲಿ ಕೆರೆಗಳನ್ನು ನಿರ್ಮಿಸಿದರು.
ಇದರಿಂದ ಅವರ 9 ಎಕರೆ ಜಮೀನು ಸೇರಿದಂತೆ ಬೇರೆ ರೈತರ ನೂರಾರು ಎಕರೆ ಬಂಜರು ಭೂಮಿ ಈಗ ಕೃಷಿಗೆ ಯೋಗ್ಯ ಜಮೀನಾಗಿ ಪರಿವರ್ತನೆಯಾಗಿದೆ. ಕಮತೆ ಅವರ ಎರಡು ಎಕರೆ ಜಮೀನಿನಲ್ಲಿ ಮಾವು, ಒಂದು ಎಕರೆಯಲ್ಲಿ ಸೀತಾಫಲ ಮರಗಳು ಸಮೃದ್ಧವಾಗಿ ಬೆಳೆದುನಿಂತಿವೆ. ಉಳಿದ ಜಮೀನಿನಲ್ಲಿ ನೆಲ್ಲಿ, ನೇರಳೆ ಮತ್ತಿತರ ಹಣ್ಣಿನ ಮರಗಳಿದ್ದು, ವಾರ್ಷಿಕವಾಗಿ ₹8 ಲಕ್ಷದಿಂದ ₹10 ಲಕ್ಷ ಆದಾಯ ತಂದುಕೊಡುತ್ತಿವೆ.
ಕೆರೆಗಳ ಕೆಳಭಾಗದ ರೈತರ ಜಮೀನಿನಲ್ಲೂ ಅಂತರ್ಜಲ ಮಟ್ಟ ಹೆಚ್ಚಿದ್ದು, ಅಲ್ಲಿನ ರೈತರು ಕಬ್ಬು, ಶೇಂಗಾ, ಸೋಯಾಬೀನ್ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಕಮತೆ ಅವರ ಪ್ರೇರಣೆಯಿಂದ ಕೆಲ ರೈತರು ಸಣ್ಣ ಕೆರೆ ಮತ್ತು ಬಾವಿ ತೋಡಿ ಕೃಷಿ ಮಾಡುತ್ತಿದ್ದಾರೆ.
ಕಮತೆ ನಿರ್ಮಿಸಿದ ಕೆರೆಗಳು ಬೇಸಿಗೆಯಲ್ಲಿ ನೂರಾರು ಜಾನುವಾರುಗಳ ದಾಹ ನೀಗಿಸುತ್ತಿವೆ. ಕೆರೆಗಳ ನಿರ್ಮಾಣದಿಂದ ಈ ಭಾಗದಲ್ಲಿ ನವಿಲು, ಗುಬ್ಬಚ್ಚಿ ಮತ್ತಿತರ ಪಕ್ಷಿಗಳ ಸಂತತಿಯೂ ಹೆಚ್ಚಾಗಿದೆ. ಕೃಷಿ ವಿಜ್ಞಾನಿಗಳು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಕೆರೆಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನೇ ಪ್ರೇರಣೆಯಾಗಿ ಇಟ್ಟುಕೊಂಡು ನಾನು ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿದ್ದೇನೆ. ಇದರಿಂದ ನೂರಾರು ಎಕರೆ ಜಮೀನು ಹಸಿರಾಗಿದ್ದು ಖುಷಿ ತಂದಿದೆಎಸ್.ಸಿ.ಕಮತೆ ಎಂಜಿನಿಯರ್
ಕೆರೆಗಳ ನಿರ್ಮಾಣದ ಮೂಲಕ ಬಂಜರು ಭೂಮಿ ಹಸಿರಾಗಿಸಿದ ಕಮತೆ ಅವರ ಕಾರ್ಯ ಶ್ಲಾಘನೀಯತ್ಯಾಗರಾಜ ಕದಂ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.