ADVERTISEMENT

ಬೆಳಗಾವಿ: ಬೇಸಿಗೆಯಲ್ಲಾದರೂ ಸೌಧದಿಂದ ನೀರು ಕೊಡಿ

ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಜಾಗ ಕೊಟ್ಟ ಹಲಗಾ ಗ್ರಾಮಸ್ಥರ ಒತ್ತಾಯ

ಇಮಾಮ್‌ಹುಸೇನ್‌ ಗೂಡುನವರ
Published 8 ಡಿಸೆಂಬರ್ 2025, 2:12 IST
Last Updated 8 ಡಿಸೆಂಬರ್ 2025, 2:12 IST
<div class="paragraphs"><p>ಬಸ್ತವಾಡದಲ್ಲಿ ಕುಡಿಯುವ ನೀರಿಗಾಗಿ ವೃದ್ಧರೊಬ್ಬರು ಕೊಡಗಳನ್ನು ಇರಿಸುತ್ತಿರುವುದು&nbsp; </p></div>

ಬಸ್ತವಾಡದಲ್ಲಿ ಕುಡಿಯುವ ನೀರಿಗಾಗಿ ವೃದ್ಧರೊಬ್ಬರು ಕೊಡಗಳನ್ನು ಇರಿಸುತ್ತಿರುವುದು 

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ‘ಹಿಡಕಲ್‌ ಜಲಾಶಯದಿಂದ ಸುವರ್ಣ ವಿಧಾನಸೌಧಕ್ಕೆ ಬಿಡುವ ನೀರನ್ನೇ ನಮ್ಮೂರಿಗೂ ಹರಸಿ ಎಂದು ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಸರ್ಕಾರದ ಗಮನಕ್ಕೂ ತಂದಿದ್ದೇವೆ. ಆದರೆ, ಸಿಕ್ಕ ಸ್ಪಂದನೆ ಶೂನ್ಯ. ಈಗ ವರ್ಷವಿಡೀ ನಮಗೆ ನೀರು ಬಿಡಲಾಗದಿದ್ದರೂ, ಬೇಸಿಗೆಯಲ್ಲಾದರೂ ಕೊಡಿ...’

ADVERTISEMENT

ತಾಲ್ಲೂಕಿನ ಹಲಗಾ ಗ್ರಾಮ ಪಂಚಾಯಿತಿ ಸದಸ್ಯ ವಿಲಾಸ ಪರೀಟ್‌ ‘ಪ್ರಜಾವಾಣಿ’ ಮುಂದೆ ಒತ್ತಾಯಿಸಿದ್ದು ಹೀಗೆ. ಹಲಗಾ ಗ್ರಾಮದಲ್ಲಿ ಸುತ್ತಾಡಿದಾಗ ಬಹುತೇಕರು ಇದೇ ರೀತಿ ಆಗ್ರಹಿಸುತ್ತಾರೆ.

‘ಅಧಿವೇಶನಕ್ಕ ಬಂದ ರಾಜಕಾರಣಿಗೋಳ್‌ ಹತ್ತ ದಿನ ಜಾತ್ರಿ(ಅಧಿವೇಶನ) ಮಾಡಿಹೋಗ್ತಾರು. ರಾಜ್ಯದ ನಾನಾ ಸಮಸ್ಯೆಗಳನ್ನ ಇಲ್ಲಿ ಚರ್ಚಿಸ್ತಾರು. ಆದ್ರ ನಮ್ಮ ಕಷ್ಟ ಕೇಳೂದಿಲ್ಲ’ ಎಂಬುದು ಅವರ ಅಳಲು.

ಎರಡು ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ, ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಈ ಗ್ರಾಮದ ಚಿತ್ರಣ ಬದಲಾಗಿದೆ. ರಸ್ತೆಗಳ ಸ್ಥಿತಿ ಸುಧಾರಿಸಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಮಾತ್ರ ನೀಗಿಲ್ಲ.

ಸೌಧಕ್ಕೆ ಬರುವ ನೀರನ್ನೇ ಹರಿಸಿ:

ಹಲಗಾ–ಬಸ್ತವಾಡ ಗುಡ್ಡದ ಮೇಲೆ ನಿರ್ಮಾಣವಾದ ಸುವರ್ಣ ವಿಧಾನಸೌಧ 2012ರಲ್ಲಿ ಉದ್ಘಾಟನೆಯಾಗಿದೆ. ಹಲಗಾ, ಬಸ್ತವಾಡದ ರೈತರು ಇದಕ್ಕೆ ಜಮೀನು ನೀಡಿದ್ದಾರೆ. ಸೌಧದ  ಬಳಕೆಗಾಗಿಯೇ ಹಿಡಕಲ್‌ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ಸೌಧದ ಆವರಣದಲ್ಲಿ ನೀರು ಶುದ್ಧೀಕರಣ ಘಟಕವೂ  ಇದೆ. ಒಂದು ಕಿ.ಮೀ ಪೈಪ್‌ಲೈನ್‌ ಕಾಮಗಾರಿ ಮಾಡಿ, ಆ ಘಟಕದಿಂದ ತಮ್ಮೂರಿಗೆ ನೀರು ಹರಿಸಬೇಕು ಎಂದು ಗ್ರಾಮಸ್ಥರು ದಶಕ ಹೋರಾಡುತ್ತಿದ್ದಾರೆ. ಆದರೆ, ನ್ಯಾಯ ಸಿಕ್ಕಿಲ್ಲ.

ಹಲಗಾ–ತಾರಿಹಾಳ ರಸ್ತೆಯಿಂದ ಸೌಧಕ್ಕೆ ಸಾಗಲು ನಿರ್ಮಿಸಿದ ಕಿರಿದಾದ ರಸ್ತೆ
ಇಡೀ ನಾಡಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ರಾಜ್ಯ ಸರ್ಕಾರ ಹಲಗಾ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ನೀಗಿಸವುದಕ್ಕೆ ಆದ್ಯತೆ ಕೊಡಬೇಕು
ವಿಲಾಸ ಪರೀಟ್‌ ಸದಸ್ಯ ಹಲಗಾ ಗ್ರಾಮ ಪಂಚಾಯಿತಿ
ಅಧಿವೇಶನ ವೇಳೆ ಪ್ರತಿಭಟನೆಗೆ ಬಂದವರು ನಮ್ಮ ಹೊಲದಲ್ಲೆಲ್ಲ ಮದ್ಯದ ಬಾಟಲಿ ಕುಡಿಯುವ ನೀರಿನ ಬಾಟಲಿ ಎಸೆದುಹೋಗುತ್ತಾರೆ. ಅವುಗಳನ್ನು ಸ್ವಚ್ಛ ಮಾಡಲು ನಾವು ಎರಡು ದಿನ ವ್ಯಯಿಸಬೇಕು
ಮಲ್ಲಸರ್ಜ ಬಡವನ್ನವರ ಗ್ರಾಮಸ್ಥ ಬಸ್ತವಾಡ

ಬೇಸಿಗೆಯಲ್ಲಿ ಬತ್ತುತ್ತವೆ

‘ಹಲಗಾ ಗ್ರಾಮದಲ್ಲಿ 1442 ಮನೆಗಳಿವೆ. ಗ್ರಾಮಸ್ಥರ ದಾಹ ನೀಗಿಸಲು ಮೂರು ತೆರೆದಬಾವಿ 10–12 ಕೊಳವೆಬಾವಿ ಇವೆ. ಅವುಗಳಿಂದ ಗ್ರಾಮದ ನಲ್ಲಿಗಳಿಗೆ ನೀರು ಬಿಡಲಾಗುತ್ತದೆ. ಆದರೆ ಬೇಸಿಗೆ ಆರಂಭದಲ್ಲೇ ಅವು ಬತ್ತುತ್ತವೆ’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ. ‘ಬೇಸಿಗೆಯಲ್ಲಿ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತೇವೆ. ಸೌಧದಿಂದ ನಮಗೆ ನೀರು ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದು ಅವರು ತಿಳಿಸುತ್ತಾರೆ.

ಬಸ್ತವಾಡದಲ್ಲೂ ಇದೇ ಪರಿಸ್ಥಿತಿ

‘ಹಲಗಾ ಗ್ರಾಮಕ್ಕೆ ಹೋಲಿಸಿದರೆ ಬಸ್ತವಾಡದ ಸ್ಥಿತಿಯೂ ಭಿನ್ನವಿಲ್ಲ. ಗ್ರಾಮದ ನಲ್ಲಿಗಳಿಗೆ ಎರಡು ದಿನಕ್ಕೊಮ್ಮೆ ಬಿಡುತ್ತಿರುವ ನೀರು ಸಾಲುತ್ತಿಲ್ಲ. ನೀರಿಗಾಗಿ ನಲ್ಲಿಗಳ ಮುಂದೆ ಗ್ರಾಮಸ್ಥರು ಕೊಡ ಇಟ್ಟು ಕಾಯುವುದು ತಪ್ಪಿಲ್ಲ. ಹಾಗಾಗಿ ಸೌಧದಿಂದ ತಮ್ಮೂರಿಗೂ ನೀರು ಬಿಡಬೇಕು’ ಎಂಬುದು ಗ್ರಾಮಸ್ಥ ಮಂಗೂರ ಚೌಗುಲೆ ಆಗ್ರಹ.

ಪರಿಹಾರ ಕೊಡುತ್ತಿಲ್ಲ

‘ಹಲಗಾ–ತಾರಿಹಾಳ ರಸ್ತೆಯಿಂದ ಸೌಧದ ಕಡೆ ಸಾಗಲು ನಾಲ್ಕು ವರ್ಷಗಳ ಹಿಂದೆ ಕಿರಿದಾದ ರಸ್ತೆ ನಿರ್ಮಿಸಿದ್ದಾರೆ. ಸರ್ಕಾರದವರು ಅದಕ್ಕೆ ನಮ್ಮ ಜಮೀನು ಪಡೆದಿದ್ದಾರೆ. ಆದರೆ ಪರಿಹಾರ ಕೊಡದೆ ಸತಾಯಿಸುತ್ತಿದ್ದಾರೆ’ ಎಂದು ರೈತ ನಾರಾಯಣ ಶಿಂಧೆ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.