ಭೀಮಪ್ಪ ಗಡಾದ
ಬೆಳಗಾವಿ: ‘ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು ಕೊಡುವ ವಿಚಾರವಾಗಿ ಚರ್ಚಿಸಲು ಘಟಪ್ರಭಾ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ಒತ್ತಾಯಿಸಿ, ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಪ್ರಭಾ ಯೋಜನೆ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳದೆ ಹಿಡಕಲ್ ಜಲಾಶಯದಲ್ಲಿ ಸಂಗ್ರಹವಿರುವ ನೀರು ಬಳಕೆಗೆ ಅವಕಾಶವಿಲ್ಲ. ಹು–ಧಾ ಕೈಗಾರಿಕೆಗಳಿಗೆ ನೀರು ಹಂಚಿಕೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಪೂರ್ವ ಈ ಸಮಿತಿ ಸಭೆ ನಡೆಸಿಲ್ಲ. ಬದಲಿಗೆ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಫೆ.1ರಂದು ಸಭೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಕೈಗಾರಿಕೆಗಳಿಗೆ ನೀರು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದೆ’ ಎಂದು ದೂರಿದರು.
‘ಇಷ್ಟೆಲ್ಲ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದ್ದರೂ, ಘಟಪ್ರಭಾ ಯೋಜನೆ ನೀರಾವರಿ ಸಲಹಾ ಸಮಿತಿಯಲ್ಲಿ ಇರುವ ಯಾವೊಬ್ಬ ಸದಸ್ಯರೂ ನೀರು ಹಂಚಿಕೆ ಬಗ್ಗೆ ವಿರೋಧಿಸುತ್ತಿಲ್ಲ. ಇದನ್ನು ಗಮನಿಸಿದರೆ ರೈತರು ಮತ್ತು ಸಾರ್ವಜನಿಕರ ಹಿತ ಮರೆತು, ಬಂಡವಾಳಶಾಹಿಗಳಿಗೆ ಮಣೆ ಹಾಕಲು ಎಲ್ಲರೂ ಮುಂದಾಗಿರುವುದು ಸ್ಪಷ್ಟವಾಗುತ್ತದೆ’ ಎಂದು ಆಪಾದಿಸಿದರು.
‘ಕೈಗಾರಿಕೆಗಳಿಗೆ ಹಿಡಕಲ್ ಜಲಾಶಯದ ನೀರು ಹಂಚಿಕೆ ವಿರೋಧಿಸಿ ಆರಂಭಗೊಂಡ ಹೋರಾಟಗಳು ಈಗ ತೀವ್ರಗೊಳ್ಳುತ್ತಿವೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದರೆ, ಸರ್ಕಾರಿ ಆಸ್ತಿ–ಪಾಸ್ತಿಗೆ ಹಾನಿಯಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ. ಇಂಥ ಘಟನೆಗಳು ನಡೆಯುವ ಮುನ್ನ, ಹು–ಧಾ ಕೈಗಾರಿಕೆಗಳಿಗೆ ನೀರು ಪೂರೈಸುವ ವಿಷಯವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ತಕ್ಷಣವೇ ಸಮಿತಿ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.