ADVERTISEMENT

ಚಿಕ್ಕೋಡಿ ಉಪಕಾಲುವೆಗೆ ಕೃಷ್ಣೆಯಿಂದ ನೀರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 3:11 IST
Last Updated 8 ನವೆಂಬರ್ 2023, 3:11 IST
ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಬಳಿ ಚಿಕ್ಕೋಡಿ ಉಪಕಾಲುವೆಗೆ ಕೃಷ್ಣಾ ನದಿಯಿಂದ ನೀರು ಹರಿಯುತ್ತಿದೆ
ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಬಳಿ ಚಿಕ್ಕೋಡಿ ಉಪಕಾಲುವೆಗೆ ಕೃಷ್ಣಾ ನದಿಯಿಂದ ನೀರು ಹರಿಯುತ್ತಿದೆ   

ಚಿಕ್ಕೋಡಿ: ಪ್ರಸಕ್ತ ವರ್ಷ ಮಳೆ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಬೆಳೆ ನಷ್ಟವಾಗಿದ್ದು, ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದರೆ, ಏತ ನೀರಾವರಿ ಯೋಜನೆ ಮೂಲಕ ಕೃಷ್ಣಾ ನದಿಯಿಂದ ಚಿಕ್ಕೋಡಿ ಉಪಕಾಲುವೆಗೆ ನೀರು ಹರಿಸುತ್ತಿರುವುದರಿಂದ ಹತ್ತಾರು ಹಳ್ಳಿಗಳ ಕೃಷಿಕರು ಹರ್ಷಗೊಂಡಿದ್ದಾರೆ.

ಚಿಕ್ಕೋಡಿ ಉಪಕಾಲುವೆಯ ಕಿ.ಮಿ.ನಂ 54 (ಬಸವನಾಳಗಡ್ಡೆ)ಯಿಂದ ಕಿ.ಮೀ.88 (ಚಿಕ್ಕಲವಾಳ)ವರೆಗೆ ಕೃಷ್ಣಾ ನದಿಯಿಂದ ನೀರು ಹರಿಸಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಹಿರೇಕೋಡಿ, ನಾಗರಾಳ, ನೇಜ್, ಶಿರಗಾಂವ, ಶಿರಗಾಂವವಾಡಿ, ಸಂಕನವಾಡಿ, ನವಲಿಹಾಳ, ಖಡಲಕಲಾಟ, ಚಿಕ್ಕಲವಾಳ ಮೊದಲಾದ ಗ್ರಾಮಗಳಿಗೆ ನೀರು ಹರಿಯುತ್ತಿದ್ದು, ಈ ಗ್ರಾಮಗಳ ವ್ಯಾಪ್ತಿಯ ಕೆರೆಕಟ್ಟೆಗಳು, ಚೆಕ್‌ಡ್ಯಾಂಗಳೂ ಭರ್ತಿಯಾಗುತ್ತಿವೆ. ಅಂತರ್ಜಲಮಟ್ಟ ಹೆಚ್ಚುತ್ತಿದ್ದು, ಇದರಿಂದಾಗಿ ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಿದಂತಾಗಿದೆ ಎಂದು ರೈತರು ಹೇಳುತ್ತಾರೆ.

ಚಿಕ್ಕೋಡಿ ಉಪಕಾಲುವೆ ನಿರ್ಮಾಣಗೊಂಡು ಎರಡು ದಶಕ ಕಳೆದರೂ ನಿಯಮಿತವಾಗಿ ನೀರು ಹರಿಯುತ್ತಿರಲಿಲ್ಲ. ರೈತರ ಬವಣೆಗೆ ಸ್ಪಂದಿಸಿದ ಶಾಸಕ ಗಣೇಶ ಹುಕ್ಕೇರಿ ಮತ್ತು ಆಗಿನ ಸಂಸದ ಪ್ರಕಾಶ ಹುಕ್ಕೇರಿ ವಿಶೇಷ ಪ್ರಯತ್ನಪಟ್ಟು 2017ರಲ್ಲಿ ಸರ್ಕಾರದಿಂದ ₹147 ಕೋಟಿ ಅನುದಾನ ಮಂಜೂರಾತಿ ಪಡೆದುಕೊಂಡು ಯೋಜನೆಯನ್ನು ಸಾಕಾರಗೊಳಿಸಿದ್ದಾರೆ.

ADVERTISEMENT
ರೈತರ ಬೆಳೆಗಳು ಹಾಳಾಗದಿರಲಿ ಎನ್ನುವ ಸುದುದ್ದೇಶದಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿಕರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು
ಗಣೇಶ ಹುಕ್ಕೇರಿ, ಶಾಸಕ ಚಿಕ್ಕೋಡಿ-ಸದಲಗಾ

'ತಾಲ್ಲೂಕಿನ ಕಲ್ಲೋಳ ಬಳಿಯಿಂದ ಕೃಷ್ಣಾ ನದಿಯಿಂದ 15.2 ಕಿ.ಮಿ. ಉದ್ದದ ಪೈಪ್ ಲೈನ್ ಮೂಲಕ ನೀರು ಎತ್ತುವಳಿ ಮಾಡಿ ಚಿಕ್ಕೋಡಿ ಉಪಕಾಲುವೆಗೆ ನೀರು ಹರಿಸಲಾಗುತ್ತಿದೆ. ಯೋಜನೆಯಡಿ ನೀರು ಎತ್ತುವಳಿಗಾಗಿ 2470 ಎಚ್.ಪಿ.ಸಾಮರ್ಥ್ಯದ ನಾಲ್ಕು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದ್ದು, 12,634 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ' ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

‘ಕೃಷಿಕರಿಗೆ ಸೂಕ್ತ ನೀರಾವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇದರಿಂದಾಗಿ ಸುಮಾರು ಸಾವಿರಾರು ಎಕರೆ ಭೂಮಿ ನೀರಾವರಿಗೆ ಒಳಪಡುತ್ತಿದೆ. ನೀರು ಎತ್ತುವಳಿಗಾಗಿ ನಾಲ್ಕು ವಿದ್ಯುತ್ ಮೋಟಾರ್ ಪಂಪ್‌ಸೆಟ್‌ಗಳನ್ನು ಕೃಷ್ಣಾ ನದಿಗೆ ಅಳವಡಿಸಲಾಗಿದೆ. ₹8.50 ಕೋಟಿ ವೆಚ್ಚದಲ್ಲಿ ಕಾಲುವೆ ದುರಸ್ತಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಅನಾವೃಷ್ಟಿಯಿಂದ ಬಾವಿ ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಕುಸಿತಗೊಂಡಿತ್ತು. ಕೃಷ್ಣಾ ನದಿಯಿಂದ ನೀರು ಹರಿಸುತ್ತಿರುವುದರಿಂದ ಅಂತರ್ಜಲಮಟ್ಟ ಹೆಚ್ಚುತ್ತಿದ್ದು ಬರಗಾಲದಲ್ಲೂ ನೀರಾವರಿ ಬವಣೆ ನೀಗಿದಂತಾಗಿದೆ
ಸುರೇಶ ಈರಪ್ಪ ಬೋರಗಲ್ಲೆ, ಕೃಷಿಕ ಖಡಕಲಾಟ

ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರು ಆರಂಭಿಸಿರುವ ಶಿವಶಕ್ತಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೂ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಘಟಪ್ರಭಾ ಬಲದಂಡೆ ಉಪಕಾಲುವೆಗೂ ನಿಯಮಿತವಾಗಿ ನೀರು ಹರಿಸಬೇಕು ಎಂಬ ಕೃಷಿಕರ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸಲಾಗುವುದು. ಚಿಂಚಣಿಯಿಂದ ವಾಳಕಿವರೆಗಿನ ಸುಮಾರು 18 ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೂ ಪ್ರಯತ್ನಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.