ಸವದತ್ತಿ: ಪಶ್ಚಿಮ ಘಟ್ಟದಲ್ಲಿ ಸುರಿದ ಭಾರೀ ಮಳೆಯಿಂದ ಮಲಪ್ರಭಾ ನದಿಯ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನವಿಲುತೀರ್ಥ (ಇಂದಿರಾ) ಅಣೆಕಟ್ಟು 10ನೇ ಬಾರಿ ಭರ್ತಿಯಾಗುವ ಕಾಲ ಸನ್ನಿಹಿತವಾಗಿದೆ. ಇದರಿಂದ ಆಣೆಕಟ್ಟೆ ಕೆಳಭಾಗದ ಮತ್ತು ನದಿ ಪಾತ್ರದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ.
ನವಿಲುತೀರ್ಥ ಅಣೆಕಟ್ಟೆ ಗರಿಷ್ಠ ಮಟ್ಟ 2079.50 ಅಡಿ. ಇದೀಗ 2069.60 ಅಡಿ ನೀರು ಸಂಗ್ರಹವಾಗಿದೆ. ಸದ್ಯ 21 ಸಾವಿರ ಕ್ಯುಸೆಕ್‌ಗೂ ಅಧಿಕ ಒಳಹರಿವಿದೆ. 10 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಶನಿವಾರದಿಂದ ಹೊರಬಿಡಲಾಗುತ್ತಿದೆ. ಮುನವಳ್ಳಿ, ತೆಗ್ಗೀಹಾಳ, ರಾಮದುರ್ಗ ಸೇರಿ ಜಲಾಶಯದ ಕೆಳಭಾಗದ ಗ್ರಾಮಗಳಿಗೆ ಎಚ್ಚರಿಕೆ ವಹಿಸಲು ತಾಲ್ಲೂಕು ಆಡಳಿತ ಸೂಚಿಸಿದೆ.
2019ರಲ್ಲಿ ಮಲಪ್ರಭೆ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿತ್ತು. ಆರಂಭದಲ್ಲಿ 28 ಸಾವಿರ ಕ್ಯುಸೆಕ್‌ನಷ್ಟು ಇದ್ದ ಒಳಹರಿಸುವ ಕೆಲವೇ ದಿನಗಳಲ್ಲಿ 1.10 ಲಕ್ಷ ಕ್ಯುಸೆಕ್‌ಗೆ ಏರಿತ್ತು. ಇಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗದೇ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಅಣೆಕಟ್ಟೆಯ ಸುರಕ್ಷತೆ ಹಾಗೂ ಜಲಾನಯನ ಪ್ರದೇಶಗಳ ಜನರ ಸುರಕ್ಷತೆಗೆ ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸಿತ್ತು. ಈ ಬಾರಿ ಮತ್ತೆ ಅಂಥದ್ದೇ ಮಳೆಗಾಲ ಮರಳಿದೆ. ಹೀಗಾಗಿ, ಪ್ರವಾಹ ಬಂದರೂ ಅಚ್ಚರಿಪಡಬೇಕಿಲ್ಲ.
ತಹಶೀಲ್ದಾರ್ ಎಂ.ಎನ್. ಹೆಗ್ಗನವರ ಮತ್ತು ತಾಲ್ಲೂಕು ನೋಡಲ್ ಅಧಿಕಾರಿ ಮಹಾಂತೇಶ ಮುರಗೋಡ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಮನೆ ಹಾನಿ: ನಿರಂತರ ಮಳೆಗೆ ಭಾಗಶಃ ಮನೆಗಳು ಸೋರಿಕೆಯಾಗಿ ಕುಸಿಯಲಾರಂಭಿಸಿವೆ. ಕಳೆದರೆಡು ದಿನಗಳಲ್ಲಿ 14 ಮನೆಗಳು ಭಾಗಶಃ ಹಾನಿಗೀಡಾಗಿವೆ.
ನಿರ್ವಹಣೆ ಕೊರತೆ ಹಾಗೂ ಮಳೆಯ ಕಾರಣ ರಸ್ತೆಗಳೆಲ್ಲವೂ ಜಲಾವೃತಗೊಂಡು ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಸವದತ್ತಿ– ಮುನವಳ್ಳಿ, ಸವದತ್ತಿ– ನವಲಗುಂದ, ಯಲ್ಲಮ್ಮಗುಡ್ಡದ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ.
ಬೇಸಿಗೆಯಲ್ಲಿ ರಸ್ತೆಗಳ ನಿರ್ವಹಣೆಗೆ ಒತ್ತು ನೀಡದ ಅಧಿಕಾರಿಗಳು ಮಳೆ ಆರಂಭವಾದ ನಂತರ ತಗ್ಗು ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದಾರೆ. ಹದಗೆಟ್ಟ ರಸ್ತೆಯಿಂದ ನಿತ್ಯವೂ ವಾಹನ ಸವಾರರು ಜೀವ ಭಯದಲ್ಲಿಯೇ ಸಂಚಾರ ನಡೆಸಿದ್ದಾರೆ. ಇನಾಮಹೊಂಗಲದ ಹತ್ತಿರದ ರಸ್ತೆ ಸೇತುವೆಯ ತಡೆಗೊಡೆ ಧ್ವಂಸಗೊಂಡು ಅಪಾಯ ಆಹ್ವಾನಿಸಿಸುತ್ತಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮ ಜರುಗಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.