ADVERTISEMENT

ನೀರಿನ ಪ್ರಮಾಣದಲ್ಲಿ ಹೆಚ್ಚಳ: ನದಿ ತೀರದಲ್ಲಿ ಹೆಚ್ಚಿದ ಆತಂಕ

ಸಂಕಷ್ಟದಲ್ಲಿ ಜನರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:17 IST
Last Updated 8 ಆಗಸ್ಟ್ 2019, 13:17 IST

ಬೆಳಗಾವಿ: ‌ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಮತ್ತು ಬೈಲಹೊಂಗಲ, ಖಾನಾಪುರ, ಚಿಕ್ಕೋಡಿ, ನಿಪ್ಪಾಣಿ, ಅಥಣಿಯಲ್ಲಿ ಮಳೆ ಮುಂದುವರಿಯಿತು. ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಅಲ್ಲಿನ ಕೊಯ್ನಾ ಮೊದಲಾದ ಜಲಾಶಯಗಳಿಂದ ಕೃಷ್ಣಾ ನದಿಗೆ 4 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಇದರಿಂದ, ನದಿ ನೀರಿನ ಮಟ್ಟ ಹೆಚ್ಚಾಗುವುದರೊಂದಿಗೆ ತೀರದಲ್ಲಿರುವ ಮತ್ತಷ್ಟು ಗ್ರಾಮಗಳಲ್ಲಿ ಆತಂಕ ಜಾಸ್ತಿಯಾಗಿದೆ.

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದ ಶಿಲ್ಪಾ ಸಿದ್ದಪ್ಪ ಮನಗೂಳಿ (10) ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಾಟುವಾಗ ಕಾಲು ಜಾರಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ. ಮಲಪ್ರಭಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ರಾಮದುರ್ಗ ಪಟ್ಟಣ ಹಾಗೂ 29 ಗ್ರಾಮಗಳು ಜಲಾವೃತವಾಗಿವೆ. ಸಂತ್ರಸ್ತರಾದ ಅಲ್ಲಿನ ಜನರಿಗಾಗಿ ಜಿಲ್ಲಾಡಳಿತದಿಂದ 34 ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇಡೀ ರಾಮದುರ್ಗ ಪಟ್ಟಣ ದ್ವೀಪವಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶರಣೆ ಗಂಗಾಂಬಿಕೆ ಐಕ್ಯಮಂಟಪ ಬಹುತೇಕ ಮುಳುಗಡೆಯಾಗಿದೆ. ಪಕ್ಕದ ವಿಠ್ಠಲ-ರುಕ್ಮೀಣಿ ಮಂದಿರ, ಅಶ್ವತ್ಥ-ಲಕ್ಷ್ಮಿನರಸಿಂಹ ದೇವಸ್ಥಾನ, ನದಿ ಸಮೀಪದ ಮನೆಗಳೆಲ್ಲ ಸಂಪೂರ್ಣ ಜಲಾವೃತವಾಗಿವೆ.

ADVERTISEMENT

‌ರಾಯಬಾಗ ತಾಲ್ಲೂಕಿನ ಕುಡಚಿಯ ಜನತಾ ಕಾಲೊನಿ ಮುಳುಗಡೆಯಾಗಿದೆ. ಪ್ರವಾಹಪೀಡಿತ ಗ್ರಾಮಗಳಲ್ಲಿನ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇದಕ್ಕಾಗಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಸೇನಾ ಸಿಬ್ಬಂದಿಯನ್ನು ಬಳಸಲಾಗುತ್ತಿದೆ. ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.

ಬೈಲಹೊಂಗಲ ತಾಲ್ಲೂಕಿನ ಹೊಳಿಹೊಸೂರಲ್ಲಿ ಮುಖ್ಯ ರಸ್ತೆ ಕುಸಿದಿದೆ. ಖಾನಾಪುರ ತಾಲ್ಲೂಕಿನಾದ್ಯಂತ 24 ಗಂಟೆಗಳಲ್ಲಿ ಸರಾಸರಿ 24 ಸೆಂ.ಮೀ. ಮಳೆಯಾಗಿದೆ. ಎಲ್ಲ ರಸ್ತೆಗಳೂ ಬಂದ್ ಆಗಿವೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗಾವಿ-ಖಾನಾಪುರ ರಸ್ತೆ ಸ್ಥಗಿತಗೊಂಡ ಕಾರಣ ಹಾಲು, ತರಕಾರಿ, ಪೆಟ್ರೋಲ್, ಡೀಸೆಲ್‌ ಪೂರೈಕೆ ಸ್ಥಗಿತವಾಗಿದೆ. ಈ ತಾಲ್ಲೂಕಿನಲ್ಲಿ 450 ಮನೆಗಳಿಗೆ ಹಾನಿಯಾಗಿದೆ. 20 ಜಾನುವಾರುಗಳು ಸಾವಿಗೀಡಾಗಿವೆ. 24 ಹಳ್ಳಿಗಳು ಜಲಾವೃತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.