ADVERTISEMENT

ಹಿಡಕಲ್ ಜಲಾಶಯದಿಂದ 7 ದಿನ ನೀರು ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 12:43 IST
Last Updated 25 ಮೇ 2021, 12:43 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಗೋಕಾಕ: ‘ಜನ ಹಾಗೂ ಜಾನುವಾರುಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ಮೇ 27ರಿಂದ 7 ದಿನಗಳವರೆಗೆ ನೀರು ಬಿಡುಗಡೆ ಮಾಡಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

‘ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ತಲಾ 1.50 ಟಿಎಂಸಿ ಹಾಗೂ ಸಿಬಿಸಿ ಕಾಲುವೆಗೆ 0.50 ಟಿಎಂಸಿ ನೀರು ಹರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಸ್ಪಂದಿಸಿದ ಅವರು ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಈಗ ನೀರು ಬಿಡುಗಡೆ ಮಾಡುವುದರಿಂದಾಗಿ, ಹಿಡಕಲ್ ಜಲಾಶಯದಲ್ಲಿ ಒಂದು ಟಿಎಂಸಿ ನೀರಷ್ಟೇ ಉಳಿಯಲಿದೆ. ನದಿ ತೀರದ ಜನರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗೋಕಾಕ, ಮೂಡಲಗಿ ಮತ್ತು ರಾಯಬಾಗ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಮತ್ತು ಬೀಳಗಿ ತಾಲ್ಲೂಕುಗಳ ಜನರಿಗೆ ಇದರಿಂದ ನೆರವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.