ADVERTISEMENT

ನೀರು ಬಿಡುಗಡೆ: ಮಹಾರಾಷ್ಟ್ರ ಪೂರ್ವ ಮಾಹಿತಿ ನೀಡಲಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 14:21 IST
Last Updated 4 ಸೆಪ್ಟೆಂಬರ್ 2019, 14:21 IST
ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ರೈತರು ಮೋಟಾರ್‌ ತೆಗೆದುಕೊಂಡು ಹೋಗಲು ಮುಂದಾದ ದೃಶ್ಯ
ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ರೈತರು ಮೋಟಾರ್‌ ತೆಗೆದುಕೊಂಡು ಹೋಗಲು ಮುಂದಾದ ದೃಶ್ಯ   

ಅಥಣಿ: ‘ಕೃಷ್ಣಾ ನದಿಯಲ್ಲಿ ಪ್ರವಾಹ ಬಂದು ತಾಲ್ಲೂಕಿನ 24 ಹಳ್ಳಿಗಳ ಜನರು ಪಡಬಾರದ ಕಷ್ಟ ಪಟ್ಟಿದ್ದಾರೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಈಗ, ನದಿಯ ಒಳಹರಿವು ಹೆಚ್ಚಾಗುತ್ತಿರುವುದರಿಂದ ದಂಡೆಯ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ, ನೀರು ಹರಿಸುವ ಮುನ್ನ ಮಹಾರಾಷ್ಟ್ರ ಸರ್ಕಾರದವರು ಮಾಹಿತಿ ನೀಡಬೇಕು’ ಎಂದು ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೆಪ್ಪ ಶಿವಪ್ಪ ಠಕ್ಕಣ್ಣವರ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ದಂಡೆಯ ಗ್ರಾಮಗಳಲ್ಲಿ ತೊಂದರೆಯಾಗುವ ಸಂಭವವಿದೆ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು’ ಎಂದು ಕೋರಿದರು.

ಹಿಪ್ಪರಗಿ ಅಣೆಕಟ್ಟು ಹಿನ್ನೀರಿನ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಮೇಶಗೌಡ ಪಾಟೀಲ, ಮುಖಂಡರಾದ ನಿಶಾಂತ ದಳವಾಯಿ, ಮಲ್ಲಪ್ಪ ಹಂಚಿನಾಳ, ಶಿವಾನಂದ ಪಾಟೀಲ, ಗುಂಡುರಾವ ಲಾಲಸಿಂಗಿ, ಸದಾಶಿವ ಕೆಂಗಲಗುತ್ತಿ, ಅಲಗೌಡ ಪಾಟೀಲ, ಪ್ರಭು ಜನವಾಡ ಇದ್ದರು.

ADVERTISEMENT

‘ಮಹಾರಾಷ್ಟ್ರದಲ್ಲಿ ಮಳೆಯಾಗಿರುವುದರಿಂದ ಕೃಷ್ಣಾ ನದಿಯ ಒಳಹರಿವು ಸ್ವಲ್ಪ ಹೆಚ್ಚಾಗಿದೆ. ಬುಧವಾರ ಅಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಪ್ರವಾಹ ಉಂಟಾಗುವಷ್ಟು ನೀರು ಹರಿದು ಬರುತ್ತಿಲ್ಲ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಾಲ್ಲೂಕು ಆಡಳಿತ ಸಿದ್ಧವಿದೆ’ ಎಂದು ತಹಶೀಲ್ದಾರ್‌ ಎಂ.ಎನ್. ಬಳಿಗಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.