ADVERTISEMENT

ಯುಕೆಪಿ ರಾಷ್ಟ್ರೀಯ ಯೋಜನೆ ಘೋಷಣೆಗೆ ಕ್ರಮ: ರಮೇಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 10:04 IST
Last Updated 13 ಫೆಬ್ರುವರಿ 2021, 10:04 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶನಿವಾರ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು ಬಹುತೇಕ ಅಂತಿಮವಾಗಿದೆ. ಅಂತೆಯೇ ಯುಕೆಪಿಗಾಗಿಯೂ ಪ್ರಕ್ರಿಯೆ ನಡೆಯುತ್ತಿದೆ. ಇದು ಸಾಧ್ಯವಾದರೆ ನಮ್ಮ ರಾಜ್ಯಕ್ಕೆ ಐತಿಹಾಸಿಕ ಗೆಲುವು ಸಿಕ್ಕಂತಾಗುತ್ತದೆ. ಉತ್ತರ ಕರ್ನಾಟಕದ ಹೆಮ್ಮೆ ಎನಿಸಲಿದೆ’ ಎಂದು ಹೇಳಿದರು.

‘ಫೆ. 21 ಹಾಗೂ 22ರಂದು ದೆಹಲಿ ಪ್ರವಾಸ ಕೈಗೊಂಡಿದ್ದೇನೆ. ರಾಜ್ಯದ ಪರ ವಕೀಲ ಮೋಹನ ಕಾತರಕಿ ಹಾಗೂ ಕಾನೂನು ತಜ್ಞರ ಜೊತೆ ಮಹತ್ವದ ಸಭೆ ಇದೆ. ಮಹದಾಯಿ ನದಿ ನೀರು ಹಂಚಿಕೆ ವಿಷಯ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚಿಸಲಿದ್ದೇನೆ. ಕೆಲವು ಯೋಜನೆಗಳಿಗಿರುವ ತಡೆಯಾಜ್ಞೆ ತೆರವುಗೊಳಿಸಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆಯೂ ನಿರ್ಧರಿಸಲಾಗುವುದು’ ಎಂದರು.

ADVERTISEMENT

ಯುಕೆಪಿ ರಾಷ್ಟ್ರೀಯ ಯೋಜನೆಗಾಗಿ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್‌ನವರು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದರಲ್ಲಿ ರಾಜಕೀಯದ ಅವಶ್ಯಕತೆ ಇಲ್ಲ. ಈಗ ನಾವು ಘೋಷಣೆ ಮಾಡಿಸುವ ಸಾಧ್ಯತೆ ಇರುವುದನ್ನು ನೋಡಿಕೊಂಡು ಪಾದಯಾತ್ರೆ ನಡೆಸುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

‘ಭದ್ರಾ ಯೋಜನೆ ಬಹಳ ಹಳೆಯದಾಗಿರುವುದರಿಂದ ಶೇ.90ರಷ್ಟು ಕೇಂದ್ರದ ಅನುದಾನವಿದ್ದರೆ ರಾಜ್ಯ ಸರ್ಕಾರದ್ದು ಶೇ.10ರಷ್ಟಿದೆ. ಯುಕೆಪಿಗೆ ಶೇ.60ರಷ್ಟು ಅನುದಾನ ಕೇಂದ್ರದ್ದಾದರೆ, ಶೇ.40ರಷ್ಟು ರಾಜ್ಯದ್ದಿರುತ್ತದೆ’ ಎಂದರು.

‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನೆರೆಯ ರಾಜ್ಯಗಳ ಮನವೊಲಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲಿ. ಆಗ ನಮಗೆ ಇನ್ನೂ ನಾಲ್ಕೈದು ಟಿಎಂಸಿ ನೀರು ಜಾಸ್ತಿ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಪಾಲಿನ ನೀರು ಬಳಸಲು, ಅರಣ್ಯ ಇಲಾಖೆಯಿಂದ ಶೀಘ್ರವೇ ಅನುಮೋದನೆ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.