ADVERTISEMENT

ಬೆಳಗಾವಿ: ‘ಸಾಂಸ್ಕೃತಿಕ ಲೋಕವನ್ನು ಮಾನವೀಯಗೊಳಿಸಬೇಕು’

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 14:44 IST
Last Updated 14 ಜನವರಿ 2021, 14:44 IST
ಬೆಳಗಾವಿಯಲ್ಲಿ ಗುರುವಾರ ನಡೆದ ಬಂಡಾಯ ಸಂಘಟನೆ ಜಿಲ್ಲಾ ವಿದ್ಯಾರ್ಥಿ ಘಟಕದ ಆಯ್ಕೆ ಸಭೆಯಲ್ಲಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿದರು. ದಿವ್ಯಾ ಕಾಂಬಳೆ, ಅಕ್ಷತಾ ಯಳ್ಳೂರ, ಮಂಜುನಾಥ ಪಾಟೀಲ, ಮಹೇಶ ಶಿಂಗೆ ಇದ್ದಾರೆ
ಬೆಳಗಾವಿಯಲ್ಲಿ ಗುರುವಾರ ನಡೆದ ಬಂಡಾಯ ಸಂಘಟನೆ ಜಿಲ್ಲಾ ವಿದ್ಯಾರ್ಥಿ ಘಟಕದ ಆಯ್ಕೆ ಸಭೆಯಲ್ಲಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿದರು. ದಿವ್ಯಾ ಕಾಂಬಳೆ, ಅಕ್ಷತಾ ಯಳ್ಳೂರ, ಮಂಜುನಾಥ ಪಾಟೀಲ, ಮಹೇಶ ಶಿಂಗೆ ಇದ್ದಾರೆ   

ಬೆಳಗಾವಿ: ‘ಸಾಂಸ್ಕೃತಿಕ ಲೋಕವನ್ನು ಇನ್ನಷ್ಟು ಜನಪರ ಮತ್ತು ಮಾನವೀಯಗೊಳಿಸುವ ಜವಾಬ್ದಾರಿ ನಮ್ಮದಾಗಿದೆ’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕವು ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕರ ಆಯ್ಕೆಗಾಗಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಸಮಕಾಲೀನ ಸಾಂಸ್ಕೃತಿಕ ಲೋಕ ತೀವ್ರ ಗೊಂದಲದಲ್ಲಿದೆ. ಅದರಲ್ಲೂ ವಿದ್ಯಾರ್ಥಿ ಸಮೂಹದ ದುರ್ಬಳಕೆ ಆಗುತ್ತಿದೆ. ಅದಕ್ಕಾಗಿ ಕಥೆ, ಕವಿತೆ ಬರೆಯುವ, ಚಿತ್ರಬಿಡಿಸುವ, ಹಾಡುವ, ಅಭಿನಯಿಸುವ ಎಲ್ಲ ಸೃಜನ ಕಲೆಗಳನ್ನುಳ್ಳ ಪದವಿ ಹಂತದ ಪ್ರತಿಭೆಗಳನ್ನು ಶೋಧಿಸಿ, ತಕ್ಕ ವೇದಿಕೆ ಒದಗಿಸಿ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಸಶಕ್ತಗೊಳಿಸಬೇಕು.

ADVERTISEMENT

‘ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಹರಿಹರ, ಕನಕ, ಕುಮಾರವ್ಯಾಸ, ಸರ್ವಜ್ಞ, ಕುವೆಂಪು, ಕಾರಂತ, ಕಟ್ಟೀಮನಿ, ನಿರಂಜನ, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ ಮೊದಲಾದವರಿಂದ ಕನ್ನಡ ಸಾಹಿತ್ಯ ಪರಂಪರೆ ಜನಪರ ಮತ್ತು ಜೀವಪರವಾಗಿದೆ. ಇದನ್ನು ಅರಿಯುವ ಹಾಗೂ ಬರೆಯುವ ಜವಾಬ್ದಾರಿಯನ್ನು ವಿದ್ಯಾರ್ಥಿ ಸಮೂಹದಲ್ಲಿ ಬಿತ್ತುವುದು ಬಂಡಾಯ ಸಾಹಿತ್ಯ ಸಂಘಟನೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ವಿಚಾರಸಂಕಿರಣ, ಕಾರ್ಯಾಗಾರ ‌ಮತ್ತು ಸಂವಾದದ ಮೂಲಕ ಬಂಡಾಯ ಸಾಹಿತ್ಯದ ವಿದ್ಯಾರ್ಥಿ ಘಟಕವನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ಜಿಲ್ಲಾ ಸಂಚಾಲಕರಾದ ಡಾ.ಅಡಿವೆಪ್ಪ ಇಟಗಿ, ನದೀಮ್ ಸನದಿ ಹಾಗೂ ಶಾಮ ಕಲ್ಲೋಳಿ, ವಿದ್ಯಾರ್ಥಿ ಘಟಕದ ನೂತನ ಜಿಲ್ಲಾ ಸಂಚಾಲಕರಾದ ಮಂಜುನಾಥ ಪಾಟೀಲ, ಮಹೇಶ ಶಿಂಗೆ, ದಿವ್ಯಾ ಕಾಂಬಳೆ, ಅಕ್ಷತಾ ಯಳ್ಳೂರ, ಗೋಪಿಕಾ ಹೇರಿಗೆ ಇದ್ದರು.

ಸಂಘಟನೆಯ ಸದಸ್ಯರಾದ ಶಂಕರ ಬಾಗೇವಾಡಿ ಸ್ವಾಗತಿಸಿದರು. ಸ್ವಾತಿ ಪೋಳ ನಿರ್ವಹಿಸಿದರು. ಸಂತೋಷ ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.