ADVERTISEMENT

ಘಟಪ್ರಭಾ ಸಹಕಾರಿ ಕಾರ್ಖಾನೆ ಮಾರುವುದಿಲ್ಲ: ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:13 IST
Last Updated 12 ಜುಲೈ 2021, 15:13 IST
ಗೋಕಾಕದಲ್ಲಿ ಸೋಮವಾರ ನಡೆದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮಕ್ತೆದಾರರ ಜಂಟಿ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು
ಗೋಕಾಕದಲ್ಲಿ ಸೋಮವಾರ ನಡೆದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮಕ್ತೆದಾರರ ಜಂಟಿ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು   

ಗೋಕಾಕ (ಬೆಳಗಾವಿ ಜಿಲ್ಲೆ): ‘ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಮಾರುವುದಿಲ್ಲ’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಹೊರವಲಯದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ‘ಪ್ರಿಯದರ್ಶಿನಿ’ ಸಮುದಾಯ ಭವನದಲ್ಲಿ ಸೋಮವಾರ ನಡೆದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮಕ್ತೆದಾರರ (ಕಬ್ಬು ಕಡಿಯುವವರು, ತುಂಬುವ ಗ್ಯಾಂಗ್‌ಗಳು) ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಲ್ಲಿ ಸ್ಥಾಪಿತವಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಹಬ್ಬಿಸುತ್ತಿರುವ ವದಂತಿಗಳನ್ನು ಯಾರೂ ನಂಬಬಾರದು. ಈಗಲೂ ನಮ್ಮ ಆಡಳಿತದಲ್ಲಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ರೈತರನ್ನು ಬಿಡುವುದಿಲ್ಲ:

‘ಕಾರ್ಖಾನೆಗೆ ಬೆನ್ನೆಲುಬಾಗಿ ನಿಂತಿರುವ ರೈತರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅವರೇ ಆಧಾರ ಸ್ತಂಭವಾಗಿದ್ದಾರೆ. ಇದು ಯಾರಪ್ಪನ ಆಸ್ತಿಯೂ ಅಲ್ಲ. ಇದು ರೈತರ ಸ್ವತ್ತು. ಬೇರೊಬ್ಬರಿಗೆ ಮಾರುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

‘ಕಾರ್ಖಾನೆಯು ನಷ್ಟದಲ್ಲಿದ್ದ ಸಂದರ್ಭದಲ್ಲಿ ಬೋರಗಾಂವ ಅರಿಹಂತ ಸೊಸೈಟಿಯಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದೇವೆ. ರೈತರ ಕಬ್ಬಿನ ಬಿಲ್‌ ಸಂದಾಯ ಮಾಡಲು ತೆಗೆದುಕೊಂಡಿದ್ದೇವೆ. ಇದನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆ ಮಾರಲಾಗಿದೆ ಎಂದು ಕೆಲ ಹಿತಾಸಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಇದು ಸತ್ಯಕ್ಕೆ ದೂರವಾದ ಸಂಗತಿ’ ಎಂದರು.

‘ಇಲ್ಲಿನ ಹೆಮ್ಮೆಯಾದ ಈ ಕಾರ್ಖಾನೆಯು ರೈತರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅದನ್ನು ಸಮರ್ಥವಾಗಿ ನಡೆಸುತ್ತೇವೆ. ರೈತರ ಹಿತ ಕಾಪಾಡುತ್ತೇವೆ. 1992ರಿಂದ ರೈತರ ಸಹಕಾರದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ನಾವು ಎಷ್ಟೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಮೆಟ್ಟಿ ನಿಂತಿದ್ದೇವೆ. ರೈತರು–ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿದ್ದೇವೆ. ಇತರ ಕಾರ್ಖಾನೆಗಳಿಗಿಂತ ಅಧಿಕ ಬಿಲ್‌ ನೀಡುತ್ತಿದ್ದೇವೆ’ ಎಂದು ಹೇಳಿದರು.

‘ಕಬ್ಬು ನುರಿಸುವ ಹಂಗಾಮನ್ನು ಸೆಪ್ಟೆಂಬರ್‌ ಬದಲಿಗೆ ಅಕ್ಟೋಬರ್ 15ಕ್ಕೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಮುಂದಿನ 2 ವರ್ಷದೊಳಗೆ ಹೆಚ್ಚಿನ ಲಾಭ ಬರುವಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕಬ್ಬು ಅಭಿವೃದ್ಧಿ ವಿಭಾಗದ ಸಿಬ್ಬಂದಿ ರೈತರೊಂದಿಗೆ ಕೆಲ ಗೊಂದಲಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಇದು ಸರಿಯಲ್ಲ. ರೈತರೊಂದಿಗೆ ಉತ್ತಮವಾಗಿ ವ್ಯವಹರಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಲಾಜಿಲ್ಲದೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಸಿಎ ಸೈದಪ್ಪ ಗದಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.