ADVERTISEMENT

ಲವ್ ಜಿಹಾದ್‌ಗೆ ತಡೆ, ಗೋ ಹತ್ಯೆ ನಿಷೇಧ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 13:06 IST
Last Updated 5 ಡಿಸೆಂಬರ್ 2020, 13:06 IST
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ನಳಿನ್‌ಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೂಡಿ ಉದ್ಘಾಟಿಸಿದರು / ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ನಳಿನ್‌ಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೂಡಿ ಉದ್ಘಾಟಿಸಿದರು / ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಲವ್‌ ಜಿಹಾದ್‌ಗೆ ಕಡಿವಾಣ ಹಾಗೂ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಪಕ್ಷದ ರಾಜ್ಯ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಂಡಿದೆ. ಈ ವಿಷಯದಲ್ಲಿ ಮುಂದಿನ ನಿರ್ಣಯವನ್ನು ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಲವ್ ಜಿಹಾದ್ ಎನ್ನುವುದು ಬಹಳ ಆತಂಕದ ವಿಷಯ. ಪ್ರೀತಿ–ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಹೇಳಿದರು.

‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳುವ ಮೂಲಕ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕೆಂದು ನಿರ್ಣಯಿಸಲಾಗಿದೆ. ಇದು ಕಾರ್ಯಕರ್ತರ ಚುನಾವಣೆ. ಪಕ್ಷದ ಚಿಹ್ನೆ ಇರುವುದಿಲ್ಲ. ಆದರೆ, ಅಲ್ಲಿ ಸ್ಪರ್ಧಿಸುವ ನಮ್ಮ ಕಾರ್ಯಕರ್ತರಿಗೆ ಜನಪ್ರತಿನಿಧಿಗಳು ಬೆಂಬಲ ನೀಡಲಿದ್ದಾರೆ’ ಎಂದರು.

ADVERTISEMENT

ಸಮಿತಿಗಳು:‘ಚುನಾವಣಾ ನಿರ್ವಹಣಾ ಸಮಿತಿ ಹಾಗೂ ಶಿಸ್ತು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

‘ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಭಾರಿಗಳನ್ನು ನೇಮಿಸಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದ ನಂತರ ಆ ಬಗ್ಗೆ ಸಮಾಲೋಚನೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಕಾರ್ಯಕಾರಿಣಿಯು ಯಶಸ್ವಿ ಹಾಗೂ ವ್ಯವಸ್ಥಿತವಾಗಿ ಮುಗಿದಿದೆ. ಕೋವಿಡ್ ಕಾರಣದಿಂದಾಗಿ ಬಹಳಷ್ಟು ಮಂದಿ ವರ್ಚುಯೆಲ್ ವೇದಿಕೆಯಲ್ಲಿ ಪಾಲ್ಗೊಂಡಿದ್ದರು’ ಎಂದು ತಿಳಿಸಿದರು.

‘ಸಚಿವ ಸಂಪುಟದ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಸಮಯಾವಕಾಶ ನೋಡಿಕೊಂಡು ಹಾಗೂ ಕೇಂದ್ರದ ನಾಯಕರ ಜೊತೆ ಮಾತನಾಡಿ ನಿರ್ಧರಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಶಿಸ್ತು ಕ್ರಮದ ಎಚ್ಚರಿಕೆ:

‘ಸಂಪುಟ ವಿಸ್ತರಣೆಯಲ್ಲಿ ಪಕ್ಷದ ಕೆಲವೊಬ್ಬರು ನೋವು ತೋಡಿಕೊಂಡಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದರು. ಅಂಥವರನ್ನೆಲ್ಲ ಕರೆದು ಮಾತನಾಡಿದ್ದೇವೆ. ಪಕ್ಷದ ಆತಂಕರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡದಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು. ಸಮಸ್ಯೆ ಆಲಿಸುವುದಕ್ಕೆ ಪಕ್ಷದ ವೇದಿಕೆ ಇದೆ. ಅಲ್ಲಿ ಚರ್ಚಿಸಬೇಕು. ಇದನ್ನು ಮೀರಿದರೆ ಪಕ್ಷವು ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

ಉಸ್ತುವಾರಿಯಿಂದ ಮಾರ್ಗದರ್ಶನ:ಗಾಂಧಿ ಭವನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸಂಘಟನೆ ಬಲಪಡಿಸುವ ಬಗ್ಗೆ ಮಾರ್ಗದರ್ಶನ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್, ರಮೇಶ್ ಜಾರಕಿಹೊಳಿ, ಆರ್. ಅಶೋಕ್, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.