ADVERTISEMENT

ಬೆಳಗಾವಿ | ಚನ್ನಮ್ಮ ಮೃಗಾಲಯಕ್ಕೆ ‘ತ್ರಿಡಿ’ ಸ್ಪರ್ಶ

ಅತ್ಯಾಧುನಿಕ ವಸ್ತುಸಂಗ್ರಹಾಲಯ, ಸಭಾಂಗಣ, ಆಸ್ಪತ್ರೆ, ಆಹಾರ ಸಂಸ್ಕರಣಾ ಘಟಕ, ಮರಣೋತ್ತರ ಪರೀಕ್ಷಾ ಕೊಠಡಿ ಪ್ರಗತಿಯಲ್ಲಿ

ಸಂತೋಷ ಈ.ಚಿನಗುಡಿ
Published 18 ಜುಲೈ 2025, 1:52 IST
Last Updated 18 ಜುಲೈ 2025, 1:52 IST
ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ತ್ರಿಡಿ ಸಭಾಂಗಣ ಕಾಮಗಾರಿ ಭರದಿಂದ ಸಾಗಿದೆ
ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ತ್ರಿಡಿ ಸಭಾಂಗಣ ಕಾಮಗಾರಿ ಭರದಿಂದ ಸಾಗಿದೆ   

ಭೂತರಾಮನಹಟ್ಟಿ: ‘ನರೇಗಾ’ದಿಂದ ಅಭಿವೃದ್ಧಿಪಡಿಸಿದ ದೇಶದ ಏಕಮಾತ್ರ ಮೃಗಾಲಯ ಎಂಬ ಖ್ಯಾತಿಗೆ ಪಾತ್ರವಾದ, ಇಲ್ಲನ ರಾಣಿ ಚನ್ನಮ್ಮ ಕಿರು ಮೃಗಾಲಯ ಈಗ ಮತ್ತೊಂದು ಗರಿಮೆಗೆ ಸಿದ್ದವಾಗಿದೆ. ವೀಕ್ಷಣೆಯ ಜತೆಗೆ ಪ್ರಾಣಿ ಪ್ರಪಂಚದ ಜ್ಞಾನಾರ್ಜನೆಗೂ ಮುಂದಡಿ ಇಟ್ಟಿದೆ. ಇದಕ್ಕಾಗಿ ₹3.80 ಕೋಟಿ ವೆಚ್ಚದ ಸುಸಜ್ಜಿತ ವಸ್ತುಸಂಗ್ರಹಾಲಯ ಹಾಗೂ ತ್ರಿಡಿ ಸಭಾಂಗಣ ಸಿದ್ಧಗೊಳ್ಳುತ್ತಿದೆ.

ಮೃಗಾಲಯ ಪ್ರವೇಶ ಮಾಡುತ್ತಿದ್ದಂತೆಯೇ ಎದುರಿಗೆ ಈ ಅಡಿಟೋರಿಯಂ ಹಾಗೂ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹3 ಕೋಟಿ ಅನುದಾನವನ್ನು ಸಚಿವ ಸತೀಶ ಜಾರಕಿಹೊಳಿ ನೀಡಿದ್ದಾರೆ. ಉಳಿದ ₹80 ಲಕ್ಷವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ ಒದಗಿಸಿದೆ.

ಈ ಎರಡನ್ನೂ ಅತ್ಯಾಧುನಿಕ ಸೌಕರ್ಯಗಳ ಜತೆಗೆ, ಆಕರ್ಷಣೀಯವಾಗಿ ನಿರ್ಮಾಣ ಮಾಡಲಾಗುತ್ತಿದೆ. ಮೃಗಾಲಯ ನೋಡಲು ಬರುವವರು ಮುಂಚೆ ಇದನ್ನು ದಾಟಿಯೇ ಹೋಗಬೇಕು. ಆರಂಭದಲ್ಲೇ ಮಕ್ಕಳು, ವಯಸ್ಕರು, ಹಿರಿಯರಿಗೂ ಬೇಕಾದ ಅಗತ್ಯ ಮಾಹಿತಿ ನೀಡಬೇಕು, ಪ್ರಾಣಿ ಪ್ರಪಂಚದ ಅರಿವು ಮೂಡಿಸಬೇಕು ಎಂಬ ಕಾರಣಕ್ಕೆ ಈ ಉಪಾಯ ಮಾಡಲಾಗಿದೆ.

ADVERTISEMENT

ಜಗತ್ತಿನ ವಿವಿಧೆಡೆ ಇರುವ ವಿಶಿಷ್ಟ ಪ್ರಾಣಿಗಳು, ಪಕ್ಷಿಗಳು, ಸಮುದ್ರ ಜೀವಿಗಳನ್ನು ನೈಜವಾಗಿ ನೋಡಿದಂತೆ ಭಾಸವಾಗಬೇಕು ಎಂಬ ಕಾರಣಕ್ಕೆ ಸಭಾಂಗಣದಲ್ಲಿ ತ್ರಿಡಿ ವ್ಯವಸ್ಥೆ ಮಾಡಲಾಗುತ್ತಿದೆ. ಸಾಕ್ಷ್ಯಚಿತ್ರ ಪ್ರದರ್ಶನ ಇರಲಿದೆ. ಇದರಲ್ಲಿ ದಾಟಿ ಮುಂದೆ ಸಾಗುವಷ್ಟರಲ್ಲಿ ವೀಕ್ಷಕರ ತಲೆಯಲ್ಲಿ ಜೀವಪ್ರಪಂಚ ತುಂಬಿಕೊಳ್ಳುವ ರೀತಿ ವಿನ್ಯಾಸಗೊಳಿಸಲಾಗಿದೆ.

ಇದರ ಎದುರಿಗೇ ಇರುವ ವಸ್ತು ಸಂಗ್ರಹಾಲಯದಲ್ಲಿ ಮೃಗಾಲಯದ ಸಮಗ್ರ ಮಾಹಿತಿ ನೀಡುವುದು, ಶಾಲೆ ಹಾಗೂ ಕಾಲೇಜು ಮಕ್ಕಳಿಗೆ ಅಗತ್ಯ ಜ್ಞಾನ ಒದಗಿಸುವ ಯತ್ನ ಮಾಡಲಾಗುತ್ತಿದೆ. ಏಕಕಾಲಕ್ಕೆ 50 ಜನ ಇದರ ಪ್ರವೇಶ ಮಾಡಬಹುದು ಎಂದು ಮೃಗಾಲಯದ ಆರ್‌ಎಫ್‌ಒ ಕೆ.ಪವನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

2 ತಿಂಗಳಲ್ಲಿ ಮಧ್ಯಮ ಮೃಗಾಲಯ ಘೋಷಣೆ: ಸದ್ಯ 37 ಹೆಕ್ಟೇರ್‌ನಲ್ಲಿರುವ ಈ ಮೃಗಾಲಯ ಕಿರು ಮೃಗಾಲಯವಾಗಿದೆ. ಇದನ್ನು ಮಧ್ಯಮ ಮೃಗಾಲಯ ಮಾಡಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರಕ್ಕೆ ಕಳೆದ ವರ್ಷ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಚನೆ ಬಂದಿತ್ತು. ಅದರಂತೆ, ಎರಡನೇ ಬಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಕನಸು ಈಡೇರುವ ಸಾಧ್ಯತೆ ಇದೆ ಎಂದು ಕೆ.ಪವನ್‌ ತಿಳಿಸಿದರು.

ಇದರೊಂದಿಗೆ ಸುಸಜ್ಜಿತ ಪ್ರಾಣಿ ಆಸ್ಪತ್ರೆ, ಆಹಾರ ಸಂಸ್ಕರಣಾ ಘಟಕ, ಮರಣೋತ್ತರ ಪರೀಕ್ಷಾ ಕೊಠಡಿ ನಿರ್ಮಾಣ ಕೂಡ ಪೂರ್ಣಗೊಳ್ಳುವ ಹಂತದಲ್ಲಿವೆ. ಮಧ್ಯಮ ಮೃಗಾಲಯ ಆಗಲು ಇವೆಲ್ಲ ಅಗತ್ಯವಾದ್ದರಿಂದ ಮುಂಚಿತವಾಗಿಯೇ ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ.

ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ವಸ್ತು ಸಂಗ್ರಹಾಲಯ ಕಾಮಗಾರಿ ಭರದಿಂದ ಸಾಗಿದೆ
ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸಿದ್ಧಗೊಳ್ಳಲಿರುವ ತ್ರಿಡಿ ಸಭಾಂಗಣದ ನೀಲ ನಕ್ಷೆ
ಕೆ.ಪವನ್
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಜನರಿಗೆ ಈ ಮೃಗಾಲಯ ಆಪ್ತವಾಗಿದೆ. ವೀಕ್ಷಕರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ
ಕೆ.ಪವನ್‌ ಆರ್‌ಎಫ್‌ಒ ರಾಣಿ ಚನ್ನಮ್ಮ ಕಿರು ಮೃಗಾಲಯ

ಮೂರೇ ತಿಂಗಳಲ್ಲಿ ₹60 ಲಕ್ಷ ಆದಾಯ! ಪ್ರಸಕ್ತ ಏಪ್ರಿಲ್‌ 1ರಿಂದ ಜೂನ್ ಅಂತ್ಯದವರೆಗೆ 70 ಸಾವಿರ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದು ₹60 ಲಕ್ಷ ಆದಾಯ ಬಂದಿದೆ. ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತ ಸಾಗಿದೆ. ದೇಶದ ಬೇರೆಬೇರೆ ಮೃಗಾಲಯಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ. ಆದರೆ ರಾಣಿ ಚನ್ನಮ್ಮ ಮೃಗಾಲಯದ ಶುಲ್ಕ ಹೆಚ್ಚಳ ಮಾಡಿಲ್ಲ. ವೀಕ್ಷಕರ ಸಂಖ್ಯೆ ಹೆಚ್ಚಿರುವ ಕಾರಣ ಆದಾಯಕ್ಕೂ ಕೊರತೆ ಇಲ್ಲ ಎಂಬುದು ಅಧಿಕಾರಿಗಳ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.