ADVERTISEMENT

ಶಿವಸೇನಾಕ್ಕೆ ಅಧಿವೇಶನದಲ್ಲೇ ಪ್ರತ್ಯುತ್ತರ

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 13:39 IST
Last Updated 22 ಫೆಬ್ರುವರಿ 2021, 13:39 IST
ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೋಮವಾರ ಕನ್ನಡ ಹೋರಾಟಗಾರ ಸಭೆ ನಡೆಸಿದರು
ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೋಮವಾರ ಕನ್ನಡ ಹೋರಾಟಗಾರ ಸಭೆ ನಡೆಸಿದರು   

ಬೆಳಗಾವಿ: ‘ಮಹಾರಾಷ್ಟ್ರದಲ್ಲಿ ತನ್ನ ಆಸ್ತಿತ್ವ ಉಳಿಸಿಕೊಳ್ಳಲು ಶಿವಸೇನಾ ಪದೇ ಪದೇ ಗಡಿ ವಿವಾದ ಕೆಣಕಿ ಅಲ್ಲಿನ ಜನರ ಸಹಾನುಭೂತಿ ಗಿಟ್ಟಿಸಲು ಕುತಂತ್ರ ಮಾಡುತ್ತಿದೆ. ಇದನ್ನು ಖಂಡಿಸಿ, ಮುಂಬರುವ ಸಂಸತ್ ಅಧಿವೇಶನದಲ್ಲಿ ನಾವೂ ಗಡಿ ವಿಷಯ ಪ್ರಸ್ತಾಪಿಸಿ ತಿರುಗೇಟು ಕೊಡುತ್ತೇವೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಹಳೆಯ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ,ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಕರೆದಿದ್ದ ಕನ್ನಡ ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಈ ವಿಷಯವಾಗಿ ರಾಜ್ಯದ ಎಲ್ಲ ಸಂಸದರ ಜೊತೆಗೂ ಸಮಾಲೋಚಿಸುತ್ತೇನೆ. ಅವರಿಗೂ ಇಲ್ಲಿನ ಸಮಸ್ಯೆ ಮತ್ತು ಶಿವಸೇನಾ ಕುತಂತ್ರದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲರೂ ಧ್ವನಿ ಎತ್ತುವಂತೆ ಕೋರುತ್ತೇನೆ’ ಎಂದರು.

ADVERTISEMENT

ಮುಖ್ಯಮಂತ್ರಿ ಗಮನಕ್ಕೆ:

‘ಗಡಿ ವಿವಾದ ನಿಭಾಯಿಸಲು ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲು ಅನುಕೂಲವಾಗುವಂತೆ ಗಡಿ ಉಸ್ತುವಾರಿಯನ್ನು ನೇಮಿಸಬೇಕು ಎಂಬ ಒತ್ತಾಯವಿದೆ. ಈ ಬಗ್ಗೆ ಆದಷ್ಟು ಬೇಗ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುವುದಲ್ಲದೇ, ಅಗತ್ಯವಾದರೆ ಕನ್ನಡ ಹೋರಾಟಗಾರರ ನಿಯೋಗವನ್ನೂ ಅವರ ಬಳಿಗೆ ಕರೆದುಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

‘ಶಿವಸೇನಾ ನೇತೃತ್ವದ ಸರ್ಕಾರದ ನಡವಳಿಕೆಯನ್ನು ಸಂಸದರು ಮತ್ತು ಮುಖ್ಯಮಂತ್ರಿ ಜೊತೆಗೆ ಹಂಚಿಕೊಳ್ಳುತ್ತೇನೆ. ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಗಡಿ ವಿಚಾರದಲ್ಲಿ ಕರ್ನಾಟಕದೊಂದಿಗೆ ತಗಾದೆ ತೆಗೆಯುತ್ತಿರುವ ಶಿವಸೇನಾ ನಾಯಕರ ವರ್ತನೆಯ ಬಗ್ಗೆ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ದನಿ ಎತ್ತುತ್ತೇನೆ’ ಎಂದು ಹೇಳಿದರು.

ಎಂಇಎಸ್ ಶಕ್ತಿ ಕ್ಷೀಣಿಸಿದೆ:‘ಕರ್ನಾಟಕದ ಗಡಿ ಭಾಗದ ಜಿಲ್ಲೆಯಲ್ಲಿ ಶಿವಸೇನಾ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಶಕ್ತಿ ಬಹಳ ಕ್ಷೀಣಿಸಿದೆ. ಮೊದಲಿನ ವಾತಾವರಣ ಉಳಿದಿಲ್ಲ. ಮರಾಠಿ ಭಾಷಿಕರು ಬದಲಾಗಿದ್ದಾರೆ. ಅವರೂ ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಗಡಿ ಹೋರಾಟದಿಂದ ಏನೂ ಆಗುವುದಿಲ್ಲ ಎನ್ನುವುದು ಅವರಿಗೂ ಅರಿವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಗಡಿ ವಿವಾದ ನೋಡಿಕೊಳ್ಳಲು ಮಹಾರಾಷ್ಟ್ರವು ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದೆ. ಕರ್ನಾಟಕವು ಕಾನೂನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು. ಕರ್ನಾಟಕದ ಸಂಸದರು ಪ್ರತ್ಯುತ್ತರ ನೀಡದಿದ್ದರೆ, ಶಿವಸೇನಾದವರು ಹೇಳುವುದೆಲ್ಲವೂ ಸರಿ ಎಂಬ ಸಂದೇಶ ರವಾನೆ ಆಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು. ಕೇಂದ್ರದ ಎದುರು ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಬೇಕು. ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಶಿವಪ್ಪ ಶಮರಂತ, ಶಂಕರ ಬಾಗೇವಾಡಿ, ಕಸ್ತೂರಿ ಭಾವಿ, ಮಹಾಂತೇಶ ರಣಗಟ್ಟಿಮಠ, ಬಾಬು ಸಂಗೋಡಿ, ಅಕ್ಷಯ ಪರಮಾಜ ಪಾಲ್ಗೊಂಡಿದ್ದರು.

***

ಪ್ರಮುಖ ಆಗ್ರಹ

‘ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನಾ ಮೇಲಿಂದ ಮೇಲೆ ಗಡಿ ವಿವಾದ ಕೆಣಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಒತ್ತಾಯಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಗಡಿ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಈ ವಿಷಯ ಪ್ರಸ್ತಾಪಿಸಿದರೆ ಅದು ನ್ಯಾಯಾಂಗ ನಿಂದನೆ ಮಾಡಿದಂತೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು’ ಎಂದು ಪ್ರಮುಖವಾಗಿ ಆಗ್ರಹಿಸಲಾಯಿತು.

ಸಂಸದರೊಬ್ಬರು ಗಡಿ ಕನ್ನಡ ಹೋರಾಟಗಾರರ ಸಭೆ ನಡೆಸಿದ್ದು ಇದೇ ಮೊದಲು ಎಂದು ಹೋರಾಟಗಾರರು ತಿಳಿಸಿದರು.

***

ಗಡಿ ಕನ್ನಡಿಗರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ಯಬೇಕು. ಮುಖ್ಯಮಂತ್ರಿ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಬಳಿಗೆ ಹೋಗಿ ಶಿವಸೇನಾ ಪುಂಡಾಟಿಕೆಯ ಬಗ್ಗೆ ತಿಳಿಸಬೇಕು

ಮೆಹಬೂಬ ಮಕಾನದಾರ, ಕನ್ನಡ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.