ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ನಗರದ ತಾಪಮಾನ ಕುಸಿದಿದ್ದು, ಮೈ ನಡುಗುವಂಥ ಚಳಿ ಆವರಿಸಿದೆ. ಶನಿವಾರ ಕನಿಷ್ಠ 12.6 ಡಿಗ್ರಿ ಸೆಲ್ಸಿಯಸ್, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ ಶುಕ್ರವಾರ 12.8 ಡಿಗ್ರಿ, ಗುರುವಾರ, ಶುಕ್ರವಾರ, ಶನಿವಾರ 13 ಡಿಗ್ರಿ ದಾಖಲಾಗಿತ್ತು. ವಿಪರೀತ ಶೀತದಿಂದಾಗಿ ಸಾಂಕ್ರಾಮಿಕ ಕಾಯಿಲೆಯೂ ಹೆಚ್ಚಾಗಿದೆ. ನಗರ ಹಾಗೂ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಈಗ ಕೆಮ್ಮು, ಶೀತ, ನೆಗಡಿ, ಉಸಿರಾಟದ ತೊಂದರೆಯ ರೋಗಿಗಳೇ ಹೆಚ್ಚಾಗಿದ್ದಾರೆ.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರತಿಯೊಬ್ಬರಿಗೂ ಕೆಮ್ಮು, ಶೀತ, ಜ್ವರ, ಚಳಿ ಮುಂತಾದ ಸಾಮಾನ್ಯ ಕಾಯಿಲೆಗಳೇ ಕಾಡುತ್ತಿವೆ.
ಮೈ ಕೊರೆಯುವ ಚಳಿಯಿಂದ ಜನ ಮನೆಯಿಂದ ಹೊರಬರುವುದು ವಿರಳವಾಗಿದೆ. ಮಾರುಕಟ್ಟೆಗಳಲ್ಲಿ ಮುಂಜಾವಿನಲ್ಲಿ ಜನದಟ್ಟಣೆ ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ ಕಬ್ಬು ಕಟಾವು ಹಂಗಾಮು ಆರಂಭವಾಗಿದ್ದು, ಕಟಾವು ಗ್ಯಾಂಗ್‌ನವರು ಸ್ವೆಟರ್, ಜರ್ಕಿನ್ ಧರಿಸುತ್ತಿದ್ದಾರೆ. ಬಹುತೇಕ ಮಂದಿ ರುಮಾಲು ಸುತ್ತಿಕೊಂಡು ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ.
ಉದ್ಯಾನಗಳಲ್ಲಿ ಯೋಗ, ವ್ಯಾಯಾಮ ಹಾಗೂ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಶಾಲಾ ಮಕ್ಕಳು ಕೂಡ ಸಮವಸ್ತ್ರದ ಮೇಲೆ ಮೈತುಂಬ ಉಣ್ಣೆ ಬಟ್ಟೆಗಳನ್ನು ಧರಿಸಿಯೇ ಓಡಾಡುವಂತಾಗಿದೆ. ಪೌರಕಾರ್ಮಿಕರು, ವಾಚ್‌ಮನ್ ಕೆಲಸ ಮಾಡುವವರು ಬೆಳಿಗ್ಗೆ–ರಾತ್ರಿ ಬೆಂಕಿಗೆ ಮೈ ಕಾಯಿಸಿಕೊಳ್ಳುವುದು ಎಲ್ಲೆಡೆ ಕಂಡುಬರುತ್ತಿದೆ.
‘ನವೆಂಬರ್ 30ರಿಂದ ಡಿಸೆಂಬರ್ 6ರವರೆಗೆ ದಟ್ಟ ಮೋಡ ಕವಿದ ವಾತಾವರಣ ಇರಲಿದೆ. ಇದರಿಂದ ಆರ್ದ್ರತೆ ಹೆಚ್ಚಾಗುತ್ತದೆ. ಚಳಿ ಸರಾಸರಿ 13 ಡಿಗ್ರಿ ಆಸುಪಾಸು ಇರುತ್ತದೆ. ಆದರೆ, ಡಿಸೆಂಬರ್ 6ರ ನಂತರ ಮೋಡಗಳು ಮರೆಯಾಗುತ್ತವೆ. ಆಗ ಆರ್ದ್ರತೆ ಕುಸಿದು ಚಳಿ ಇನ್ನೂ ಹೆಚ್ಚಾಗಲಿದೆ. ಸರಾಸರಿ ಕನಿಷ್ಠ ತಾಪಮಾನ 11ರಿಂದ 12ಕ್ಕೆ ಕುಸಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ತಜ್ಞ ಸಿ.ಬಿ. ಕಬಾಡಗಿ ತಿಳಿಸಿದರು.
ದಿನದಿಂದ ದಿನಕ್ಕೆ ತಾಪಮಾನ ಕುಸಿತ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ತಾಪಮಾನ ಇಳಿಮುಖವಾಗಿ ಸಾಗಿದೆ. ಪರಿಣಾಮ, ದಿನದಿಂದ ದಿನಕ್ಕೆ ಚಳಿ ಹೆಚ್ಚಾಗಿದೆ. ನಗರವನ್ನು ‘ಕರ್ನಾಟಕದ ಕಾಶ್ಮೀರ’ ಎಂದೂ ಕರೆಯುವ ರೂಢಿ ಇದೆ. ರಾಜ್ಯದ ಉತ್ತರ ತುದಿಯ ಜಿಲ್ಲೆ ಎಂಬುದು ಒಂದು ಕಾರಣವಾದರೆ, ಇಲ್ಲಿನ ಮೈ ಕೊರೆಯುವ ಚಳಿಯ ವಾತಾವರಣ ಕೂಡ ಈ ಹೆಸರು ಬರಲು ಕಾರಣ. ಹೇಳಿಕೇಳಿ ಚಳಿಗೆ ಹೆಸರಾದ ಊರಲ್ಲಿ ಈಗ ತಾಪಮಾನ ಕೂಡ ಕಡಿಮೆಯಾಗಿದೆ. ಇದರಿಂದ ಕಳೆದೊಂದು ತಿಂಗಳಿಂದ ಚಳಿ ಸಂಬಂಧಿ ಕಾಯಿಲೆಗಳು ಹೆಚ್ಚಾಗಿವೆ.
ಜನ ಈಗ ಚುಮುಚುಮು ಚಳಿಗೆ ಮೈಯೊಡ್ಡಿದ್ದಾರೆ. ಆಟೊ ಚಾಲಕರು, ನೌಕರರು, ವಿದ್ಯಾರ್ಥಿಗಳು, ರೈತರು, ಗೃಹಿಣಿಯರು ನಸುಕಿನಲ್ಲೇ ಎದ್ದು ಕೆಲಸಕ್ಕೆ ಹಾಜರಾಗುವವರು ಥರಗುಟ್ಟುತ್ತಿದ್ದಾರೆ. ಇಷ್ಟು ದಿನ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಸ್ವೆಟರ್, ಜರ್ಕಿನ್, ಮಫ್ಲರ್, ಉಲನ್ ಟೊಪ್ಪಿಗೆ, ಸ್ಕಾರ್ಪ್, ಕಿವಿ ಪಟ್ಟಿ, ಮಂಕಿಕ್ಯಾಪ್ ಮೈ ಕೊಡವಿಕೊಂಡು ಎದ್ದಿವೆ.
ಜಿಲ್ಲೆಯಲ್ಲಿ ನಿರಂತರವಾಗಿ ಕೆಮ್ಮು ಶೀತ ಜ್ವರದ ಪ್ರಕರಣಗಳು ಕಂಡುಬರುತ್ತಿವೆ. ಆದರೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸರಿಯಾಗಿ ಜಾಗೃತಿ ಮೂಡಿಸುತ್ತಿಲ್ಲಮಲ್ಲಿಕಾರ್ಜುನ ಶಿರೂರ ಯರಗಟ್ಟಿ ನಿವಾಸಿ
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಚಿಕಿತ್ಸೆಗೆ ಇಡೀ ದಿನ ಕಾಯಬೇಕಾದ ಸ್ಥಿತಿ ಇದೆಸುವರ್ಣಾ ಹಿರೇಮಠ ಸದಾಶಿವ ನಗರ ನಿವಾಸಿ
ಈ ಬಾರಿ ಮುಂಗಾರು ಸಮಯದಲ್ಲಿ ಅತಿವೃಷ್ಟಿಯಾಗಿದೆ. ಹಿಂಗಾರು ಕೂಡ ಉತ್ತಮವಾಗಿದೆ. ಇದರಿಂದ 10 ದಿನ ಮುಂಚಿತವಾಗಿಯೇ ತಾಪಮಾನ ಕುಸಿದಿದೆ. ಜನ ಬೆಚ್ಚಗಿರಬೇಕುಜಿ.ಬಿ.ವಿಶ್ವನಾಥ ವಿಜ್ಞಾನಿ ಐಸಿಎಆರ್–ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ
* ಮನೆಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ
* ಡೆಂಗಿ ಮಲೇರಿಯಾ ಚಿಕುನ್ ಗುನ್ಯದಂಥ ರೊಗಾಣು ಸೊಳ್ಳೆಗಳು ನಿಂತ ನೀರಿನಲ್ಲಿ ಹೆಚ್ಚಾಗಿ ಹುಟ್ಟುತ್ತವೆ. ಎಲ್ಲಿ ಈ ಪ್ರಕರಣ ಕಾಣಿಸಿಕೊಳ್ಳುತ್ತವೆಯೋ ಅಲ್ಲಿನ ಗ್ರಾಮ ಪಂಚಾಯಿತಿಗೆ ಸಂವಹನ ಬೆಳೆಸಿ ಕೀಟನಾಶಕಗಳ ಸಿಂಪಡಣೆ ಮಾಡಬೇಕು
* ಮಕ್ಕಳಿಗೆ ಉದ್ದ ತೋಳಿನ ಉಲನ್ ಬಟ್ಟೆ ಹಾಕಿದರೆ ಸೊಳ್ಳೆ ಕಚ್ಚುವುದಿಲ್ಲ
* ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ
* ಪ್ರತಿದಿನ ಬೇವಿನ ತೊಪ್ಪಲು ಲೋಬಾನ ಹೊಗೆ ಅಥವಾ ಸೊಳ್ಳೆ ಬತ್ತಿಗಳನ್ನು ಉರಿಸಿ
* ವಾಹನಗಳ ಮೇಲೆ ಸಂಚರಿಸುವಾಗ ಕುಲಾಯಿ ಕುಂಚಿಗೆ ಟೊಪ್ಪಿಗೆ ಸ್ವೆಟರ್ ಧರಿಸಿ ಓಡಾಡಬೇಕು
* ತಣ್ಣನೆಯ ಆಹಾರಗಳನ್ನು ತಿನ್ನದೇ ಬಿಸಿ ಪದಾರ್ಥ ಮಾತ್ರ ಬಳಸಬೇಕು
* ಶಾಲೆಯಿಂದ ಆಟದಿಂದ ಮನೆಗೆ ಬರುವ ಮಕ್ಕಳಿಗೆ ಸಾಬೂನಿನಿಂದ ತಕ್ಷಣ ಕೈ–ಕಾಲು ತೊಳೆಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.