
ಬೆಳಗಾವಿ: ‘ಡಿಸೆಂಬರ್‌ನಲ್ಲಿ ಜರುಗಲಿರುವ ಚಳಿಗಾಲ ಅಧಿವೇಶನವನ್ನು ಕಳೆದ ಬಾರಿಯಂತೆ ಅಚ್ಚುಕಟ್ಟಾಗಿ ನಡೆಸಲು ಅನುಕೂಲವಾಗುವಂತೆ ಉಪಸಮಿತಿಗಳನ್ನು ರಚಿಸಲಾಗಿದೆ. ಉಪಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯಾವುದೇ ಲೋಪಗಳಾಗದಂತೆ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜರುಗಿದ ಚಳಿಗಾಲ ಆಧಿವೇಶನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗೆ ಪಾಸ್ ವಿತರಣೆಯನ್ನು ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ವಿತರಿಸಲು ಕ್ರಮವಹಿಸಬೇಕು. ಅಧಿಕಾರಿ, ಸಿಬ್ಬಂದಿ, ಮಾರ್ಷಲ್‌ಗಳಿಗೆ ಸುವರ್ಣವಿಧಾನ ಸೌಧದ ನೆಲಮಹಡಿಯಲ್ಲಿ ಕಳೆದ ಬಾರಿಯಂತೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಬೇಕು ಹಾಗೂ ಸುವರ್ಣ ಸೌಧದ ಹೊರಗಡೆ ಪಾವತಿ(ಪೇಡ್) ಕ್ಯಾಂಟೀನ್ ಸ್ಥಾಪಿಸಲು ಕ್ರಮ ವಹಿಸಬೇಕು’ ಎಂದರು.
‘ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳಿಗಾಗಿ ಸೂಕ್ತ ಸ್ಥಳವನ್ನು ಗುರುತಿಸುವ ಕಾರ್ಯ ಶೀಘ್ರವೆ ಆಗಬೇಕು. ಪ್ರತಿಭಟನೆಗಾಗಿ ಗುರುತಿಸಲಾದ ಸ್ಥಳಗಳಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು’ ತಿಳಿಸಿದರು.
‘ಪ್ರತಿಭಟನೆ ಸ್ಥಳ, ಮುಖ್ಯಮಂತ್ರಿ, ಸಚಿವರು, ಶಾಸಕರು ತಂಗುವಂತಹ ಸ್ಥಳಗಳಲ್ಲಿ ಆಂಬುಲೆನ್ಸ್ ಸೇರಿದಂತೆ ವೈದ್ಯರ ತಂಡವನ್ನು ನಿಯೋಜಿಸಬೇಕು. ಅದೇ ರೀತಿ ಸುವರ್ಣ ವಿಧಾನಸೌಧ ಹಾಗೂ ಆವರಣದಲ್ಲಿಯೂ ವೈದ್ಯಕೀಯ ಸಿಬ್ಬಂದಿ ಜೊತೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಇದರ ಜೊತೆಗೆ ಆಹಾರ ಸುರಕ್ಷಾ ಅಧಿಕಾರಿಗಳನ್ನು ನಿಯೋಜಿಸಬೇಕು’ ಎಂದೂ ಹೇಳಿದರು.
‘ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಜೊತೆಗೆ ವಾಹನಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ದೂರವಾಣಿ ಹಾಗೂ ಇಂಟರ್ನೆಟ್ ವ್ಯವಸ್ಥೆಯಲ್ಲಿ ಅಡೆತಡೆ ಆಗದಂತೆ ಮುಂಜಾಗೃತೆ ವಹಿಸಿಕೊಳ್ಳಬೇಕು. ಸುವರ್ಣವಿಧಾನ ಸೌಧದಲ್ಲಿ ಯಾವುದೇ ಕಾರಣಕ್ಕೂ ನೆಟವರ್ಕ್ ತೊಂದರೆ ಆಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲು’ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ನಗರ ಪೊಲೀಸ್ ಆಯುಕ್ತ ಗುಲಾಬರಾವ್ ಭೂಷಣ ಬೊರಸೆ ಮಾತನಾಡಿ, ‘ಅಧಿವೇಶನ ವೀಕ್ಷಣೆಗೆ ಆಗಮಿಸುವಂತಹ ಸಾರ್ವಜನಿಕರಿಗೆ ಪಾಸ್ ವಿತರಣೆ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ಸುವರ್ಣಸೌಧಕ್ಕೆ ಆಗಮಿಸುವಂತಹ ವಾಹನಗಳಿಗೆ ನೀಡಲಾಗಿರುವ ಪಾಸ್‌ಗಳನ್ನು ಪರಿಕ್ಷೀಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು’ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್.ಅಧಿಕಾರಿ ಅಭಿನವ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರಿಗೆ, ಊಟೋಪಾಹಾರ, ವಸತಿ ಸೇರಿದಂತೆ ಎಲ್ಲ ಉಪ ಸಮಿತಿಗಳ ಮುಖ್ಯಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.