
ಬೆಳಗಾವಿ: ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಭದ್ರತೆ ಒದಗಿಸಲು 6 ಸಾವಿರ ಪೊಲೀಸರನ್ನು ನಿಯೋಜಿಸಿದ್ದು, ಪೊಲೀಸರ ಆರೋಗ್ಯ ರಕ್ಷಣೆಗೂ ನಿಗಾ ವಹಿಸಲಾಗಿದೆ. ಸುರಕ್ಷಿತ ವಸತಿ, ಗುಣಮಟ್ಟದ ಊಟ, ಜತೆಗೆ ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಮಾಡಲಾಗಿದೆ.
ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 8 ರಿಂದ 19ರವರೆಗೆ ನಡೆಯುವ ಅಧಿವೇಶನ ಭದ್ರತೆಗೆ ಎಲ್ಲ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸುವುದು ರೂಢಿ. ಸದ್ಯ ಬೆಳಗಾವಿಯಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಅಧಿವೇಶನ ವೇಳೆಗೆ ಕನಿಷ್ಠ 12 ಡಿಗ್ರಿಯವರೆಗೆ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೈ ಕೊರೆಯುವ ಚಳಿಯಿಂದ ಪೊಲೀಸ್ ಸಿಬ್ಬಂದಿ ಕಷ್ಟ ಎದುರಿಸುವುದು ಸಹಜ. ಇದರಿಂದ ಅವರ ಆರೋಗ್ಯದಲ್ಲೂ ಏರುಪೇರಾಗುವ ತಕರಾರು ಪ್ರತಿ ವರ್ಷ ಕೇಳಿಬರುತ್ತವೆ. ಹೀಗಾಗಿ, ಈ ವರ್ಷ ಅವರ ಆರೋಗ್ಯಕ್ಕೂ ಕಾಳಜಿ ವಹಿಸಲಾಗಿದೆ.
‘ಪೊಲೀಸ್ ವಸತಿ ಗೃಹಗಳು, ಚೈತನ್ಯ ಬ್ಯಾರಕ್, ಕಾರ್ಮಿಕ ಭವನ ಸೇರಿ ಆರು ಕಡೆ ವಸತಿ ವ್ಯವಸ್ಥೆ ಇದೆ. ಮುಖ್ಯವಾಗಿ, ಸುವರ್ಣ ವಿಧಾನಸೌಧ ಬಳಿಯ ಶಿಂಧೊಳ್ಳಿ ಗ್ರಾಮದ ಗುಡ್ಡದಲ್ಲಿ ‘ಟೆಂಟ್ ಸಿಟಿ’ ನಿರ್ಮಿಸಲಾಗುತ್ತಿದೆ. ಇಲ್ಲಿ 2,500 ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. ಗುಡ್ಡದ ಮೇಲೆ ಬೆಳಿಗ್ಗೆ, ರಾತ್ರಿ ಶೀತಗಾಳಿ ಬೀಸುವ ಕಾರಣ ಮಂಚ, ಗಾದಿ, ಬೆಡ್‌ಶೀಟ್ ಕೊಡಲಾಗುವುದು. ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆಬತ್ತಿ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಮಾಡಲಾಗುತ್ತಿದೆ. ಸ್ನಾನಕ್ಕೆ ಬಿಸಿನೀರು ಕಾಯಿಸಲು ಸಿಲಿಂಡರ್ ಒಲೆಗಳು ಹಾಗೂ ದೊಡ್ಡ ಪಾತ್ರೆಗಳನ್ನು ತರಿಸಲಾಗಿದೆ. ಮನರಂಜನೆಗೆ ಸಂಗೀತ ಪರಿಕರ, ಟಿ.ವಿ ಸೌಲಭ್ಯದ ಜತೆಗೆ ಮೊಬೈಲ್ ಚಾರ್ಜರ್, ಪ್ಯಾನ್ ವ್ಯವಸ್ಥೆ ಇರುತ್ತದೆ.
ಮೊಹಮ್ಮದ್ ರೋಷನ್
ನವದೆಹಲಿಯಲ್ಲಿ ಈಚೆಗೆ ಸಂಭವಿಸಿದ ಬಾಂಬ್ ಸ್ಫೋಟ ಕೃತ್ಯದ ಕಾರಣದಿಂದ ಭದ್ರತೆ ಬಿಗಿಗೊಳಿಸಲಾಗಿದೆ. ಪೊಲೀಸ್ ಇಲಾಖೆ ಇದಕ್ಕೆ ₹5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಿದೆ.ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಪೊಲೀಸ್ ಸಿಬ್ಬಂದಿಯ ವಸತಿ ಊಟ ನೀರು ಭದ್ರತೆ ಆರೋಗ್ಯ ಸಾರಿಗೆ ಎಲ್ಲದರ ಬಗ್ಗೆ ವೆಚ್ಚ ಅಂದಾಜಿಸಿ ಸಲ್ಲಿಸಲಾಗಿದೆ. ಕಳೆದ ವರ್ಷ ಮಾಡಿದ ಎಲ್ಲ ಅನುಕೂಲಗಳು ಈಗಲೂ ಇರಲಿವೆ.ಭೂಷಣ ಬೊರಸೆ ಪೊಲೀಸ್ ಕಮಿಷನರ್ ಬೆಳಗಾವಿ
ಶಿಸ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುಣಮಟ್ಟದ ಊಟ ನೆಮ್ಮದಿಯ ನಿದ್ದೆಗೆ ಬೇಕಾದ ಸೌಲಭ್ಯ ನೀಡಲಾಗುವುದು.ನಾರಾಯಣ ಭರಮನಿ ಡಿಸಿಪಿ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.