ADVERTISEMENT

ಕಾಗವಾಡ | ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ದೂರು ದಾಖಲು

ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ತಂಟೆ, 7 ತಿಂಗಳ ಬಳಿಕ ವಿಡಿಯೊ ತುಣುಕು ಬಹಿರಂಗ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 22:03 IST
Last Updated 29 ಫೆಬ್ರುವರಿ 2024, 22:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಾಗವಾಡ: ತಾಲ್ಲೂಕಿನ ಐನಾಪುರದಲ್ಲಿ ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಏಳು ತಿಂಗಳ ಬಳಿಕ ಬಹಿರಂಗವಾಗಿದೆ. ಈ ಬಗ್ಗೆ ಸಂತ್ರಸ್ತೆಯ ಪುತ್ರಿ ಕಾಗವಾಡ ಠಾಣೆಯಲ್ಲಿ ಗುರುವಾರ ಮೂವರು ಪುರುಷರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಯ ವಿಡಿಯೊ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದರಿಂದ ಗ್ರಾಮಕ್ಕೆ ಬಂದ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ತಹಶೀಲ್ದಾರ್‌ ಸಂಜಯ ಇಂಗಳೆ ಅವರ ತಂಡ ಸಂತ್ರಸ್ತೆ ಮತ್ತು ಕುಟುಂಬದಿಂದ ಮಾಹಿತಿ ಕಲೆ ಹಾಕಿತು.

ADVERTISEMENT

‘ಮೂವರು ಆರೋಪಿಗಳು 2023ರ ಜುಲೈ 31ರಂದು ನಮ್ಮ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಮಾರನೇ ದಿನ ಆಗಸ್ಟ್ 1ರಂದು ತಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಒಡ್ಡಿದ್ದರು’ ಎಂದು ಸಂತ್ರಸ್ತೆಯ ಪುತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಗೆ ಕಾರಣ:

ಸಂತ್ರಸ್ತೆ ಕುಟುಂಬಕ್ಕೆ 1993ರಲ್ಲಿ ಸರ್ಕಾರ 3 ಎಕರೆ ಕೃಷಿ ಜಮೀನು ಮಂಜೂರು ಮಾಡಿದೆ. ಇದರಲ್ಲಿ 20 ಗುಂಟೆ ಜಮೀನು ಮತ್ತು ಪಕ್ಕದ ಸರ್ಕಾರಿ ರಸ್ತೆಯನ್ನೂ ಆರೋಪಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

‘ಎರಡೂ ಜಾಗವನ್ನು ತೆರವು ಮಾಡಿಸುವಂತೆ ಕೋರಿ 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆವು. ಜಾಗ ಪರಿಶೀಲಿಸಲು ಅವರು ತಹಶೀಲ್ದಾರ್‌ಗೆ ಸೂಚಿಸಿದ್ದರೂ ಬೇಡಿಕೆ ಈಡೇರಲಿಲ್ಲ. ನಾವು ಒತ್ತುವರಿ ಪ್ರಶ್ನಿಸಿದ್ದಕ್ಕೆ ಆರೋಪಿಗಳು ಹಲ್ಲೆ ಮಾಡಿದರು. ವಿವಸ್ತ್ರಗೊಳಿಸಿ ಅವಮಾನಿಸಿದರು’ ಎಂದು ಸಂತ್ರಸ್ತೆ ಪುತ್ರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.