ADVERTISEMENT

ಮಗುವಿನ ಸಮೇತ ನದಿಗೆ ಹಾರಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 17:00 IST
Last Updated 17 ಸೆಪ್ಟೆಂಬರ್ 2022, 17:00 IST
ರಾಮದುರ್ಗದ ಹಳೇ ಸೇವೆಯ ಮೇಲಿಂದ ಮಗುವಿನೊಂದಿಗೆ ನದಿಗೆ ಹಾರಿದ ಮಹಿಳೆಯ ಹುಡುಕಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ರಾಮದುರ್ಗದ ಹಳೇ ಸೇವೆಯ ಮೇಲಿಂದ ಮಗುವಿನೊಂದಿಗೆ ನದಿಗೆ ಹಾರಿದ ಮಹಿಳೆಯ ಹುಡುಕಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ರಾಮದುರ್ಗ: ಪಟ್ಟಣದ ಹಳೇ ಸೇತುವೆ ಬಳಿ ಶನಿವಾರ ಮಧ್ಯಾಹ್ನ ಮಹಿಳೆಯೊಬ್ಬರು ತಮ್ಮ 19 ತಿಂಗಳ ಮಗುವಿನೊಂದಿಗೆ ನದಿಗೆ ಹಾರಿದ್ದಾರೆ.

ತಾಲ್ಲೂಕಿನ ಓಬಳಾಪುರ ಗ್ರಾಮದ ರುದ್ರವ್ವ ಬಸವರಾಜ ಬನ್ನೂರ (30) ಅವರು ತಮ್ಮ ಗಂಡುಮಗು ಶಿವಲಿಂಗಪ್ಪನನ್ನು ಕಂಕುಳಲ್ಲಿ ಎತ್ತಿಕೊಂಡು ನದಿಗೆ ಹಾರಿದರು. ಸೇತುವೆ ಬಳಿ ಅವರ ಚಪ್ಪಲಿಗಳು ಮಾತ್ರ ಉಳಿದಿವೆ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದರು.

ಪೊಲೀಸ್‌ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಸತತ ಮಳೆಯಿಂದಾಗಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಮಹಿಳೆ ಹಾಗೂ ಮಗುವಿನ ಹುಡುಕಾಟ ಸವಾಲಾಗಿ ಪರಿಣಮಿಸಿದೆ.

ADVERTISEMENT

ಕಳೆದ ಕೆಲವು ದಿನಗಳಿಂದ ಪತಿ ಬಸವರಾಜ ಹಾಗೂ ಪತ್ನಿ ರುದ್ರವ್ವ ನಡುವೆ ಕಲಹ ಉಂಟಾಗಿತ್ತು. ಇದರಿಂದ ಮುನಿಸಿಕೊಂಡ ರುದ್ರವ್ವ ತಮ್ಮ ತವರು ಗ್ರಾಮ ಇಡಗಲ್‌ಗೆ ಹೋಗಿದ್ದರು. ಬಸವರಾಜ ಅವರು ಶನಿವಾರ ಪತ್ನಿಯನ್ನು ರಮಿಸಿ ಮರಳಿ ಕರೆದುಕೊಂಡು ರಾಮದುರ್ಗಕ್ಕೆ ಬಂದಿದ್ದರು. ಇಲ್ಲಿನ ಬಸ್‌ ನಿಲ್ದಾಣದಲ್ಲಿ ಉಳಿದಾಗ ಗಂಡ ಕಣ್ಣು ತಪ್ಪಿಸಿದ ರುದ್ರವ್ವ ಸೇತುವೆ ಬಳಿ ಹೋಗಿ ನದಿಗೆ ಹಾರಿದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯರಾತ್ರಿ ಮನೆಗೆ ನುಗ್ಗಿ ವ್ಯಕ್ತಿ ಕೊಲೆ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದ ಮೀನು ಮಾರ್ಕೆಟ್‌ ಬಳಿ ಶುಕ್ರವಾರ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಸುಧೀರ ಕಾಂಬಳೆ (57) ಕೊಲೆಯಾದವರು. ಸುಧೀರ ಮನೆಯಲ್ಲಿ ಮಲಗಿದ್ದಾಗ ಒಳನುಗ್ಗಿದ ದುಷ್ಕರ್ಮಿಗಳು ಅವರ ಹೊಟ್ಟೆ, ಕತ್ತು, ಮುಖಕ್ಕೆ ಮಾರಕಾಸ್ತ್ರಗಳಿಂದ ಹೊಡೆದರು. ಪಕ್ಕದ ಕೋಣೆಯಲ್ಲಿ ಅವರ ಪತ್ನಿ, ಮಕ್ಕಳು ಮಲಗಿದ್ದರೂ ವಿಷಯ ಗೊತ್ತಾಗಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗಲೇ ಕೊಲೆಯಾಗಿದ್ದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಧೀರ ಹಲವು ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದರು. ಕೋವಿಡ್‌ ಕಾರಣ ಒಂದೂವರೆ ವರ್ಷದ ಹಿಂದಷ್ಟೇ ಬೆಳಗಾವಿ ನಗರಕ್ಕೆ ಮರಳಿ ಕುಟುಂಬದೊಂದಿಗೆ ವಾಸವಾಗಿದ್ದರು. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.

ಕ್ಯಾಂಪ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

ಮಹಿಳೆಗೆ ಯಾಮಾರಿಸಿ; ಚಿನ್ನಾಭರಣ ಕಳವು

ಬೆಳಗಾವಿ: ಇಲ್ಲಿನ ಆಜಾದ್‌ ಗಲ್ಲಿಯಲ್ಲಿ ಶನಿವಾರ ರಸ್ತೆ ಬದಿ ಹೊರಟಿದ್ದ ಮಹಿಳೆಯೊಬ್ಬರನ್ನು ಯಾಮಾರಿಸಿ ಚಿನ್ನದ ಮಾಂಗಲ್ಯ ಕಿತ್ತಿಕೊಂಡ ಕಳ್ಳರು ಪರಾರಿಯಾಗಿದ್ದಾರೆ.

ಲಕ್ಷ್ಮಿ ಸಿದ್ದಪ್ಪ ಪಾಟೀಲ ಆಭರಣ ಕಳೆದುಕೊಂಡವರು. ಮಹಿಳೆಯ ಹತ್ತಿರ ಬಂದ ಯುವಕರಿಬ್ಬರು ತಮ್ಮ ಹೊಟ್ಟೆ ಹಸಿದಿದ್ದು ಊಟಕ್ಕೆ ದುಡ್ಡು ಕೊಡಿ ಎಂದು ಕೇಳಿದ್ದಾರೆ. ಲಕ್ಷ್ಮೀ ಅವರು ತಮ್ಮಲ್ಲಿದ್ದ ಹಣವನ್ನು ಇಬ್ಬರಿಗೂ ಕೊಟ್ಟರು. ಅವರೊಂದಿಗೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡ ಯುವಕರು, ‘ನಿಮ್ಮ ಕೊರಳಲ್ಲಿ ಹೀಗೆ ಚಿನ್ನಾಭರಣ ಹಾಕಿಕೊಳ್ಳಬೇಡಿ. ಕಳ್ಳತವಾಗುತ್ತದೆ. ಬಿಚ್ಚಿಕೊಟ್ಟರೆ ಕರವಸ್ತ್ರದಲ್ಲಿ ಕಟ್ಟಿ ಕೊಡುತ್ತೇವೆ’ ಎಂದು ಹೇಳಿದರು.

ಇದನ್ನು ನಂಬಿದ ಮಹಿಳೆ ಮಾಂಗಲ್ಯ ಅವರ ಕೈಗೆ ಕೊಟ್ಟರು. ಅದನ್ನು ಕರವಸ್ತ್ರದಲ್ಲಿ ಕಟ್ಟಿದಂತೆ ಮಾಡಿದ ಯುವಕರು, ಖಾಲಿ ಕರವಸ್ತ್ರವನ್ನು ಕೈಗಿಟ್ಟು ಹೋದರು ಎಂದು ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಮಾರ್ಕೆಟ್‌ ಠಾಣೆಯ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ.

ಗಾಂಜಾ ಬೆಳೆ: ಆರೋಪಿ ಬಂಧನ

ರಾಯಬಾಗ: ತಾಲ್ಲೂಕಿನ ಹುಬ್ಬರವಾಡಿಯಲ್ಲಿ ಹೊಲದಲ್ಲಿ ಗಾಂಜಾ ಬೆಳೆದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹಾಲಪ್ಪ ಲಗಮಣ್ಣ ಪೂಜಾರಿ ಬಂಧಿತರು. 338 ಕೆಜಿ ತೂಕದ 98 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಡುಕೋಣ ಬೇಟೆ: ಆರೋಪಿ ಬಂಧನ

ಖಾನಾಪುರ: ತಾಲ್ಲೂಕಿನ ನಾಗರಗಾಳಿ ವಲಯದ ಮೇರಡಾ ಶಾಖೆಯಲ್ಲಿ ಕಾಡುಕೋಣ ಬೇಟೆ ಮಾಡಿದ ಆರೋಪದ ಮೇಲೆ ಆರೋಪಿಯೊಬ್ಬರನ್ನು ಶನಿವಾರ ಬಂಧಿಸಲಾಗಿದೆ.

ಹಲಸಿ ಗ್ರಾಮದ ನಿವಾಸಿ ಇಬ್ರಾನ್ ಅಬ್ಬಾಸಿ ಬಂಧಿತ. ಆರೋಪಿಯಿಂದ ಒಂದು ಕಾರ್‌, ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಇವರೊಂದಿಗೆ ಇನ್ನೂ ಮೂವರು ಆರೋಪಿಗಳು ಇದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ನಾಗರಗಾಳಿ ಅರಣ್ಯಾಧಿಕಾರಿ ರತ್ನಾಕರ್ ಓಬನ್ನವರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.