ADVERTISEMENT

ಬೆಳಗಾವಿ: ಕಾರ್ಮಿಕ ಮಹಿಳೆ ಈಗ ಮೇಯರ್‌

ದಿನಗೂಲಿಗೆ ದುಡಿಯುತ್ತಿದ್ದ ಕೈಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುಕ್ಕಾಣಿ

ಸಂತೋಷ ಈ.ಚಿನಗುಡಿ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
<div class="paragraphs"><p>ಬೆಳಗಾವಿ ಮೇಯರ್‌ ಆದ ಬಳಿಕ ಮನೆಗೆ ಮರಳಿದ ಸವಿತಾ ಕಾಂಬಳೆ ಅವರನ್ನು, ಅವರ ಒಡನಾಡಿ ಪೌರಕಾರ್ಮಿಕ ಮಹಿಳೆಯರು ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ </p></div>

ಬೆಳಗಾವಿ ಮೇಯರ್‌ ಆದ ಬಳಿಕ ಮನೆಗೆ ಮರಳಿದ ಸವಿತಾ ಕಾಂಬಳೆ ಅವರನ್ನು, ಅವರ ಒಡನಾಡಿ ಪೌರಕಾರ್ಮಿಕ ಮಹಿಳೆಯರು ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ

   

– ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಮನೆಮನೆ ಸುತ್ತಿ ಪಾತ್ರೆ ತೊಳೆಯುತ್ತಿದ್ದ ಆ ಮಹಿಳೆ ಈಗ ಬೆಳಗಾವಿಯ ಪ್ರಥಮ ಪ್ರಜೆ. ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕೈಗಳೇ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದಿವೆ. ಪುಟ್ಟ ಹೆಂಚಿನ ಮನೆ ಮುಂದೆ ಸರ್ಕಾರಿ ಕಾರು ನಿಂತಿದೆ!

ADVERTISEMENT

ಇದು ಬೆಳಗಾವಿ ಮೇಯರ್‌ ಆಗಿ ಗುರುವಾರ ಅವಿರೋಧ ಆಯ್ಕೆಯಾದ ಸವಿತಾ ಕಾಂಬಳೆ ಅವರ ಸಂಕ್ಷಿಪ್ತ ಪರಿಚಯ. ಸಂಕಷ್ಟದ ಜೀವನ ಸಾಗಿಸಿದ ಅವರ ಬಾಳಿನಲ್ಲಿ ಬೆಳಕು ಮೂಡಿದೆ. ಇಲ್ಲಿನ ಸದಾಶಿವ ನಗರದ ಚಿಕ್ಕ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

2021ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸವಿತಾ ಅವರು 17ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದರು. ಪಾಲಿಕೆಯ 22ನೇ ಮೇಯರ್‌ ಹುದ್ದೆಗೆ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾತಿ ನಿಗದಿಯಾಗಿತ್ತು. ಆಡಳಿತಾರೂಢ ಬಿಜೆಪಿಯಲ್ಲಿ ಸವಿತಾ ಕಾಂಬಳೆ ಮತ್ತು ಲಕ್ಷ್ಮಿ ರಾಠೋಡ ಅವರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿತ್ತು. ಅಂತಿಮ ಹಂತದಲ್ಲಿ ಲಕ್ಷ್ಮಿ ಉಮೇದುವಾರಿಕೆ ಹಿಂಪಡೆದರು.

ಮೇಯರ್‌ ಆಗಿ ಅಧಿಕಾರ ವಹಿಸಿಕೊಂಡಾಗ ಸವಿತಾ ಅವರ ಕೈಗಳು ನಡುಗಿದವು. ಮೇಯರ್‌ ಗೌನು ಧರಿಸಿ, ಕುರ್ಚಿ ಮೇಲೆ ಕೂತಾಗ ಕಣ್ಣಾಲಿಗಳು ತುಂಬಿದ್ದವು. ಮೂಕವಿಸ್ಮಿತರಾಗಿ ಎಲ್ಲರಿಗೂ ಕೈಮುಗಿಯುತ್ತಲೇ ಇದ್ದರು.

ಮುಳ್ಳಿನ ಹಾದಿಯಿಂದ ಮೇಯರ್‌ ಕುರ್ಚಿವರೆಗೆ:

ರಾಯಬಾಗ ತಾಲ್ಲೂಕಿನ ಶಿರಗೂರು ಗ್ರಾಮದ ಸವಿತಾ ತಮ್ಮ ತಂದೆ–ತಾಯಿ ಜತೆಗೆ ಕೂಲಿ ಅರಸಿ ಬೆಳಗಾವಿ ನಗರಕ್ಕೆ ಬಂದವರು. ಹೆತ್ತವರೊಂದಿಗೆ ದಿನಗೂಲಿ ಮಾಡುತ್ತ ಅವರು ಜೆಒಸಿ ಓದಿದರು. ಸದ್ಯ ಸದಾಶಿವನಗರದಲ್ಲಿ 19 ವರ್ಷದ ಪುತ್ರನೊಂದಿಗೆ ವಾಸವಿದ್ದಾರೆ.

ಆರಂಭದ ದಿನಗಳಲ್ಲಿ ಸದಾಶಿವನಗರದ ಸುತ್ತಲಿನ ಮನೆಗಳಲ್ಲಿ ಪಾತ್ರೆ, ಬಟ್ಟೆ ತೊಳೆಯುವ ಕೆಲಸ ಮಾಡಿದರು. ನಂತರ ಊದುಬತ್ತಿ ತಯಾರಿಕಾ ಕಾರ್ಖಾನೆಯಲ್ಲಿ ದುಡಿದರು. ಪಾಲಿಕೆ ಸದಸ್ಯರಾಗುವ ಮುನ್ನ ಹೆಲ್ಮೆಟ್‌ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು. ತಿಂಗಳಿಗೆ ₹8,000 ಸಂಬಳದಲ್ಲಿ ಜೀವನ ಸಾಗಿಸಿದರು.

‘ಈಗಲೂ ಮನೆಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತೇನೆ. ಜೆಒಸಿ ಓದಿದ ಕಾರಣ ಕೆಲವರಿಗೆ ಟೇಲರಿಂಗ್‌ ಹೇಳಿಕೊಡಲು ಸಾಧ್ಯವಾಗಿದೆ. ಉಪಜೀವನ ಸಾಗುತ್ತಿದೆ. ಮಗ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ನನ್ನ ಸಹೋದರಿಯರೂ ಆತನ ಓದಿಗೆ ನೆರವಾಗಿದ್ದಾರೆ’ ಎಂದು ಸವಿತಾ ಕಾಂಬಳೆ ‘ಪ್ರಜಾವಾಣಿ’ ತಿಳಿಸಿದರು.

ಬಡತನದ ಬೇಗೆಯಲ್ಲಿ ಬೆಂದ ಸವಿತಾ ಅವರಿಗೆ ಪೌರಕಾರ್ಮಿಕರ ಬದುಕನ್ನು ಹಸನಾಗಿಸುವ ಕನಸು ಇದೆ. ತನ್ನಂತೆ ದುಡಿಯುವ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು ಎಂಬ ಒಲವೂ ಇದೆ.

ಬೆಳಗಾವಿ ಮೇಯರ್‌ ಆಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದ ಸವಿತಾ ಕಾಂಬಳೆ ಅವರು ಸರ್ಕಾರಿ ಕಾರಿನಲ್ಲಿ ಮನೆಗೆ ಬಂದರು. ತಮ್ಮ ಪುಟ್ಟ ಮನೆಯ ಮುಂದೆ ಕಾರು ನಿಲ್ಲಿಸಿ ನಗೆಬೀರಿದ್ದು ಹೀಗೆ – ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ ಮೇಯರ್‌ ಆಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದ ಸವಿತಾ ಕಾಂಬಳೆ ಅವರು ಸರ್ಕಾರಿ ಕಾರಿನಲ್ಲಿ ಮನೆಗೆ ಬಂದರು. ತಮ್ಮ ಪುಟ್ಟ ಮನೆಯ ಮುಂದೆ ಕಾರು ನಿಲ್ಲಿಸಿ ನಗೆಬೀರಿದ್ದು ಹೀಗೆ –

ಕನಸಿನಲ್ಲೂ ಊಹಿಸಿಕೊಳ್ಳದ ಪದವಿ ಸಿಕ್ಕಿದೆ. ಮೇಯರ್‌ ಆಗಿ ಆಯ್ಕೆ ಮಾಡಿದ ನಾಯಕರಿಗೆ ಡಾ.ಅಂಬೇಡ್ಕರ್‌ ಅವರಿಗೆ ನಾನು ಕೃತಜ್ಞಳಾಗಿದ್ದೇನೆ

-ಸವಿತಾ ಕಾಂಬಳೆ ಮೇಯರ್‌ ಬೆಳಗಾವಿ

ಮುರುಕಲು ಮನೆ ಎದುರು ಮೇಯರ್ ಕಾರು!

ಸವಿತಾ ಅವರು ಮೇಯರ್‌ ಕಾರಿನಲ್ಲಿ ತಮ್ಮ ಮನೆಗೆ ಬಂದಿದ್ದೇ ತಡ; ಸುತ್ತಲಿನ ಜನ ಅವರನ್ನು ಮುತ್ತಿಕೊಂಡರು. ಅವರೊಂದಿಗೆ ದುಡಿದ ಮಹಿಳೆಯರು ಪುಷ್ಪವೃಷ್ಟಿ ಮಾಡಿದರು. ಮುರುಕಲು ಮನೆಯ ಮುಂದೆ ದೊಡ್ಡ ಕಾರು ಬಂದು ನಿಂತಿದ್ದನ್ನು ಜನ ಅಚ್ಚರಿಯಿಂದ ನೋಡಿದರು. ಒಂದು ಕೊಠಡಿ ಇನ್ನೊಂದು ಅಡುಗೆ ಕೋಣೆಯುಳ್ಳ ಹೆಂಚಿನ ಮನೆಯಲ್ಲಿ ಅವರು ವಾಸವಿದ್ದಾರೆ. ಮಳೆಗೆ ಸೋರುವ ಕಾರಣ ಹೆಂಚಿನ ಕೆಳಗೆ ಪ್ಲಾಸ್ಟಿಕ್‌ ಚೀಲ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.