ADVERTISEMENT

ಬೆಳಗಾವಿ | ‘ಮೈತ್ರಿ’ಯಿಂದ ಸೇವಾ ಚಟುವಟಿಕೆ, ಸರ್ಕಾರಿ ಅಧಿಕಾರಿಗಳ ಪತ್ನಿಯರ ಕ್ಲಬ್‌

ಎಂ.ಮಹೇಶ
Published 7 ಮಾರ್ಚ್ 2022, 20:30 IST
Last Updated 7 ಮಾರ್ಚ್ 2022, 20:30 IST
ಬೆಳಗಾವಿಯ ರವಿವಾರ ಪೇಟೆಯ ಕಂಬಳಿಕೂಟ್‌ ಸಮೀಪ ತರಕಾರಿ ಮಾರುವ ಮಹಿಳೆಯರಿಗೆಂದು ನಿರ್ಮಿಸಿರುವ ‘ಪಿಂಕ್‌’ ಶೌಚಾಲಯದ ಉದ್ಘಾಟನೆ ವೇಳೆ ‘ಮೈತ್ರಿ’ ಕ್ಲಬ್‌ನವರು ಪಾಲ್ಗೊಂಡಿದ್ದರು
ಬೆಳಗಾವಿಯ ರವಿವಾರ ಪೇಟೆಯ ಕಂಬಳಿಕೂಟ್‌ ಸಮೀಪ ತರಕಾರಿ ಮಾರುವ ಮಹಿಳೆಯರಿಗೆಂದು ನಿರ್ಮಿಸಿರುವ ‘ಪಿಂಕ್‌’ ಶೌಚಾಲಯದ ಉದ್ಘಾಟನೆ ವೇಳೆ ‘ಮೈತ್ರಿ’ ಕ್ಲಬ್‌ನವರು ಪಾಲ್ಗೊಂಡಿದ್ದರು   

ಬೆಳಗಾವಿ: ಇಲ್ಲಿನ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಪತ್ನಿಯರು ಸೇರಿಕೊಂಡು ಕಟ್ಟಿಕೊಂಡಿರುವ ‘ಮೈತ್ರಿ’ ಮಹಿಳಾ ಕ್ಲಬ್ ಹಲವು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಗೆ ಶ್ರಮಿಸುತ್ತಿದೆ.

34 ವರ್ಷಗಳಿಂದಲೂ ಈ ಕ್ಲಬ್ ಇದೆ. ಅಧಿಕಾರಿಗಳು ವರ್ಗಾವಣೆಯಾದಂತೆಲ್ಲಾ ಸದಸ್ಯರು ಬದಲಾಗುತ್ತಿರುತ್ತಾರೆ. ಇತ್ತೀಚೆಗೆ ಬಂದಿರುವ ಹೊಸ ತಂಡವು ಕ್ಲಬ್‌ನಲ್ಲಿ ನವಚೈತನ್ಯ ಮೂಡುವಂತೆ ಮಾಡಿದೆ. ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಪತ್ನಿ ಮೈತ್ರೇಯಿ ಬಿಸ್ವಾಸ್ ಅಧ್ಯಕ್ಷೆಯಾದ ನಂತರ ಹಲವು ಸೇವಾ ಚಟುವಟಿಕೆಗಳು ನಡೆದಿವೆ.

ಕ್ಲಬ್‌ನಲ್ಲಿ 60 ಸದಸ್ಯೆಯರಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸಿ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಾರೆ. ಕಾರ್ಯಕ್ರಮ ರೂಪಿಸುತ್ತಾರೆ. ಪ್ರಸ್ತುತ ದೊಡ್ಡ ಕೊಡುಗೆಯಾಗಿರುವ ‘ಸಮಯ ದಾನ’ವನ್ನು ಸಮಾಜಕ್ಕಾಗಿ ಮಾಡುತ್ತಿದ್ದಾರೆ.

ADVERTISEMENT

ತರಕಾರಿ ಮಾರುವ ನಾರಿಯರ ನೆರವಿಗೆ:

ನಗರದ ವಿವಿಧೆಡೆಯಿಂದ ಹಾಗೂ ಹಳ್ಳಿಗಳಿಂದ ತರಕಾರಿ ಮಾರಲು ನಗರಕ್ಕೆ ಬರುವ ಮಹಿಳೆಯರ ಘನತೆ ಕಾಪಾಡಲು ನೆರವಾಗುವ ಉದ್ದೇಶದಿಂದ ಕ್ಲಬ್‌ ವತಿಯಿಂದರವಿವಾರ ಪೇಟೆಯ ಕಂಬಳಿಕೂಟ್‌ ಸಮೀಪ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಪಿಂಕ್‌’ ಶೌಚಾಲಯ ನಿರ್ಮಿಸಿದ್ದಾರೆ.

ಇದನ್ನು ಮಹಿಳೆಯರು ಉಚಿತವಾಗಿ ಬಳಸಬಹುದಾಗಿದೆ. ‘ನಾರಿ’ ಎಂಬ ಹೆಸರಿನ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರವನ್ನೂ ಅಳವಡಿಸಲಾಗಿದೆ. ಈ ಎಲ್ಲ ಸೌಲಭ್ಯಗಳನ್ನೂ ‘ಸುರಕ್ಷಾ’ ಎಂಬ ಉಪಕ್ರಮದ ಅಡಿಯಲ್ಲಿ ಕಲ್ಪಿಸಲಾಗಿದೆ. ಉದ್ಘಾಟನೆಗೊಂಂಡಿರುವ ಇದನ್ನು ಮಹಾನಗರಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆ ನೋಡಿಕೊಳ್ಳಬೇಕಿದೆ. ಮಹಿಳೆಯರ ಬಳಕೆಗೆ ಮುಕ್ತಗೊಳಿಸುವುದು ಬಾಕಿ ಇದೆ.

ಮಾದರಿ ಶೌಚಾಲಯ:

ಹೋದ ವರ್ಷ ಮಹಿಳಾ ದಿನಾಚರಣೆ ವೇಳೆ ಮಹಿಳಾ ಚಲನಚಿತ್ರೋತ್ಸವ ಆಯೋಜಿಸಿ, ನಿಧಿ ಸಂಗ್ರಹಿಸುವ ಕೆಲಸವನ್ನು ಕ್ಲಬ್‌ನಿಂದ ಮಾಡಲಾಗಿತ್ತು. ಮಹಿಳಾ ಸಾಧನೆ ಸಾರುವ ಹಾಗೂ ಮಹಿಳೆಯರೆ ಪ್ರಮುಖ ಭೂಮಿಕೆಯಲ್ಲಿರುವ ಕನ್ನಡ ಮತ್ತು ಹಿಂದಿ ಭಾಷೆಯ ಆಯ್ದ 7 ಚಲನಚಿತ್ರಗಳು ಪ್ರದರ್ಶನ ಕಂಡಿದ್ದವು. ಪ್ರತಿ‌ ಪ್ರದರ್ಶನಕ್ಕೆ ₹ 200 ಶುಲ್ಕ ನಿಗದಿಪಡಿಸಲಾಗಿತ್ತು, ಸಂಗ್ರಹವಾದ ಹಣದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹೊಸ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಇದನ್ನು ಮಾದರಿ ಶೌಚಾಲಯ ಎಂದು ಘೋಷಿಸಲಾಗಿದೆ.

ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ರುಕ್ಮಿಣಿನಗರ ಹಾಗೂ ಮೆಹಬೂಬ್ ನಗರ ಕೊಳಗೇರಿಗಳಲ್ಲಿ ಕಣ್ಣಿನ ತಪಾಸಣೆ ಶಿಬಿರವನ್ನು ಕ್ಲಬ್‌ನಿಂದ ನಡೆಸಲಾಗಿತ್ತು. ಮನೆ ಮನೆಗೆ ತೆರಳಿ ತಪಾಸಣೆ ನಡೆಸಲಾಗಿತ್ತು. 160 ಮಂದಿಗೆ ಕನ್ನಡಕಗಳನ್ನು ಕೊಡಿಸಲಾಗಿದೆ. 6 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಔಷಧಿ, ಮಾಸ್ಕ್‌ ಮೊದಲಾದವುಗಳನ್ನು ಕೂಡ ವಿತರಿಸಲಾಗಿತ್ತು.

‘ಇವೆಲ್ಲವನ್ನೂ ನಾವು ಸಮಾಜಸೇವೆ ಎಂದು ಮಾಡುತ್ತಿಲ್ಲ; ಹೊಣೆಗಾರಿಕೆ ಎಂದು ಭಾವಿಸಿ ನಿರ್ವಹಿಸುತ್ತಿದ್ದೇವೆ. ಅಧಿಕಾರಿಗಳ ಬೆಂಬಲ ನಮಗಿದೆ. ಅದು ನಮ್ಮ ಬ್ರಹ್ಮಾಸ್ತ್ರವೂ ಹೌದು. ಅದನ್ನು ಬಳಸಿಕೊಂಡು ನೆರವಾಗುತ್ತಿದ್ದೇವೆ. ವೈಯಕ್ತಿಕ ನೆಲೆಯಲ್ಲೂ ನೆರವಾಗುತ್ತಿದ್ದೇವೆ. ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳಿಗೆ ಯೋಜಿಸಿದ್ದೇವೆ’ ಎಂದು ಅಧ್ಯಕ್ಷೆ ಮೈತ್ರೇಯಿ ಬಿಸ್ವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಭಾವನೆ ಚಿಕಿತ್ಸೆಗೆ ನೀಡಿದರು

‘ಕಿತ್ತೂರು ಉತ್ಸವ’ದಲ್ಲಿ ಕ್ಲಬ್‌ನವರು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದ್ದರು. ಅದಕ್ಕೆ ಸರ್ಕಾರದಿಂದ ದೊರೆತ ₹ 20ಸಾವಿರ ಸಂಭಾವನೆಯಲ್ಲಿ ₹ 15ಸಾವಿರವನ್ನು ಯುವಕನೊಬ್ಬನ ಹೃದಯ ಶಸ್ತ್ರಚಿಕಿತ್ಸೆಗೆ ನೀಡಿ ಮಾನವೀಯತೆ ಮೆರೆದಿರುವುದು ವಿಶೇಷ.

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ಮಹಿಳಾ ಕೈದಿಗಳಿಗೆ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲು ಕ್ಲಬ್‌ನವರು ಯೋಜಿಸಿದ್ದಾರೆ. ಯುಗಾದಿ ಹಬ್ಬದಂದು ಹೊಸ ಸೀರೆಗಳನ್ನು ಕೊಡಿಸಲು ಯೋಜಿಸಿದ್ದಾರೆ.

ಬೆಳಕಾಗಬೇಕು

ಸಬಲಗೊಂಡ ನಾರಿಯರು ಅವಶ್ಯವಿರುವವರಿಗೆ ಬೆಳಕಾಗಬೇಕು. ಅದು ನಿಜವಾದ ಸಬಲೀಕರಣ ಆಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಗಮನಾರ್ಹ ಕಾರ್ಯ ಮಾಡುತ್ತಿದ್ದಾರೆ.

–ಮೈತ್ರೇಯಿ ಬಿಸ್ವಾಸ್, ಅಧ್ಯಕ್ಷೆ, ಮೈತ್ರಿ ಕ್ಲಬ್, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.