ADVERTISEMENT

ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಾಂಕೇತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:06 IST
Last Updated 5 ಜೂನ್ 2020, 20:06 IST
ಬೆಳಗಾವಿಯ ಎಸ್‌ಜಿಬಿಐಟಿ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಶುಕ್ರವಾರ ಆಚರಿಸಲಾಯಿತು
ಬೆಳಗಾವಿಯ ಎಸ್‌ಜಿಬಿಐಟಿ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಶುಕ್ರವಾರ ಆಚರಿಸಲಾಯಿತು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ವಿಶ್ವ ಪರಿಸರ ದಿನವನ್ನು ಸಂಘ–ಸಂಸ್ಥೆಗಳವರು ಸಸಿಗಳನ್ನು ನೆಡುವ ಮೂಲಕ ಶುಕ್ರವಾರ ಆಚರಿಸಿದರು. ಕೊರೊನಾ ಸೋಂಕಿನ ಭೀತಿ ಇರುವುದರಿಂದಾಗಿ ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆದವು.

ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಸಿ ನೆಟ್ಟು ನೀರೆರೆದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಾವಗಾಂವ ರಸ್ತೆಯಲ್ಲಿರುವ ಅಂಗಡಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕುಟುಂಬದವರು ಹಾಗೂ ಸಿಬ್ಬಂದಿ ಜೊತೆಗೂಡಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ನಂತರ ಮಾತನಾಡಿದ ಅಂಗಡಿ, ‘ಜಗತ್ತಿನಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜೀವವೈವಿಧ್ಯವು ಪರಸ್ಪರ ಅವಲಂಬಿತವಾಗಿದೆ. ಭೂಮಿಯ ರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳಬೇಕು’ ಎಂದರು.

ವಿಜ್ಞಾನಿ ಡಾ.ಬಿ.ಕೆ. ಪುರಂದರ ವೆಬಿನಾರ್‌ ಮೂಲಕ ಮಾತನಾಡಿದರು.

ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ‘ಸಸಿಗಳನ್ನು ಬೆಳೆಸಿ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು’ ಎಂದರು.

ಕಾಲೇಜಿನ ವೇಸ್ಟ್‌ ವಾಟರ್ ಮ್ಯಾನೇಜ್‌ಮೆಂಟ್‌, ಹೆಲ್ತ್‌ ಅಂಡ್ ಸೇಫ್ಟಿ ಎಂಜಿನಿಯರಿಂಗ್‌ ಮುಖ್ಯಸ್ಥ ಡಾ.ಬಿ.ಟಿ. ಸುರೇಶ ಬಾಬು, ಉಪಾಧ್ಯಕ್ಷೆ ಮಂಗಲ ಅಂಗಡಿ, ಶ್ರದ್ಧಾ ಶೆಟ್ಟರ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ಡಾ.ಸಂಜಯ ಪೂಜಾರಿ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ.ಸಂಗೀತಾ ದೇಸಾಯಿ, ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್‌ ಮುಖ್ಯಶಿಕ್ಷಕಿ ಆಶಾ ರಜಪೂತ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ ಪ್ರಾಚಾರ್ಯ ಪ್ರೊ.ಎಚ್.ಎಸ್. ಪಾಟೀಲ, ಪ್ರೊ.ಅಮರ ಬ್ಯಾಕೋಡಿ, ಪ್ರೊ.ನೂರಅಹ್ಮದ ಹೊಸಮನಿ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ದಮೋಣೆ ಪಾಲ್ಗೊಂಡಿದ್ದರು.

ಎಸ್‌ಜಿಬಿಐಟಿ: ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನಲ್ಲಿ ಎನ್ಎಸ್‌ಎಸ್‌ ಘಟಕ ಮತ್ತು ರೆಡ್‌ಕ್ರಾಸ್ ಸೊಸೈಟಿ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ತೋಂಟದ ಸಿದ್ಧರಾಮ ಸ್ವಾಮೀಜಿ, ಪ್ರಾಂಶುಪಾಲ ಡಾ.ಸಿದರಾಮಪ್ಪ ವಿ. ಇಟ್ಟಿ ಸಸಿ ನೆಟ್ಟರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಆರ್‌ಸಿಯು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಸರ ದಿನವನ್ನು ಎನ್.ಎಸ್.ಎಸ್. ಮತ್ತು ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಆಚರಿಸಲಾಯಿತು.

ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೋವಿಡ್-19 ಲಾಕಡೌನ್ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ವಚ್ಛ ಮತ್ತು ಸಮೃದ್ಧ ಪರಿಸರವನ್ನು ಕಾಣುತ್ತಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಪರಿಸರ ಸಂಕರಕ್ಷಿಸುವುದು ಅವಶ್ಯವಾಗಿದೆ’ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸಾಬಣ್ಣ ತಳವಾರ, ಪ್ರೊ.ಶಿವಾನಂದ ಗೊರನಾಳೆ, ಪ್ರೊ.ಚಂದ್ರಿಕಾ ಕೆ.ಬಿ., ಡಾ.ಮಹಾಂತೇಶ ಚಲವಾದಿ, ಮಂಜುನಾಥ ಎಂ.ಕೆ.ಬೋಧಕ, ಬೋಧಕೇತರ ಸಿಬ್ಬಂದಿ, ಎನ್‌ಎಸ್‌ಎಸ್ ಕೋಶದವರು ಇದ್ದರು.

‌ಭೂಗೋಳಶಾಸ್ತ್ರ ವಿಭಾಗದ ಸಂಯೋಜಕ ಡಾ.ಬಸವರಾಜ ಬಗಾಡೆ ನಿರೂಪಿಸಿದರು. ಎನ್ಎಸ್ಎಸ್ ಕೋಶದ ಸಂಯೋಜಕ ಪ್ರೊ.ಬಿ.ಎಸ್. ನಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.