ADVERTISEMENT

ಬೆಳಗಾವಿ | ಹೆಚ್ಚಳವಾಗದ ಪ್ರೋತ್ಸಾಹಧನ: ಕಲಾವಿದರಿಗೆ ಸಂಕಷ್ಟ

ಪ್ರೋತ್ಸಾಹಧನ ಮೊತ್ತ ₹50 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

ಇಮಾಮ್‌ಹುಸೇನ್‌ ಗೂಡುನವರ
Published 27 ಮಾರ್ಚ್ 2025, 6:00 IST
Last Updated 27 ಮಾರ್ಚ್ 2025, 6:00 IST
   

ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಾವು ನಾಟಕ ಪ್ರದರ್ಶಿಸುತ್ತೇವೆ. ಸಾಮಾಜಿಕ ನಾಟಕಕ್ಕೆ ₹25 ಸಾವಿರ, ಪೌರಾಣಿಕ ನಾಟಕಕ್ಕೆ ₹30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಇದು ಏತಕ್ಕೂ ಸಾಲುತ್ತಿಲ್ಲ. ಜನರಿಂದ ಹಣ ಸಂಗ್ರಹಿಸಿ ನಾಟಕವಾಡಲೂ ಕಷ್ಟವಾಗುತ್ತಿದೆ. ಪ್ರೋತ್ಸಾಹಧನ ಹೆಚ್ಚಿಸದಿದ್ದರೆ ಕಲಾವಿದರ ಬದುಕು ಬಿಗಡಾಯಿಸಲಿದೆ...

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಕರ್ನಾಟಕ ಸರ್ವ ಕಲಾವಿದರ ಹಿತರಕ್ಷಣಾ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ‘ಪ್ರಜಾವಾಣಿ’ ಮುಂದೆ ಹೀಗೆ ಬೇಸರ ಹಂಚಿಕೊಂಡರು.

ಇದು ಅವರೊಬ್ಬರ ಸಂಕಷ್ಟವಲ್ಲ. ಜಿಲ್ಲೆಯ ವಿವಿಧ ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವ ಬಹುತೇಕ ಕಲಾವಿದರು ಮತ್ತು ತಂಡಗಳ ನೋವು.

ADVERTISEMENT

ರಂಗಭೂಮಿ ಕ್ಷೇತ್ರಕ್ಕೆ ಏಣಗಿ ಬಾಳಪ್ಪನವರಂಥ ಖ್ಯಾತ ಕಲಾವಿದರನ್ನು ಸಮರ್ಪಿಸಿದ ಜಿಲ್ಲೆ ಬೆಳಗಾವಿ. ಇಲ್ಲಿ 200ಕ್ಕೂ ಅಧಿಕ ರಂಗಭೂಮಿ ಕಲಾವಿದರಿದ್ದಾರೆ. ವಿವಿಧ ಜಾತ್ರೆಗಳು, ಸಂಘ–ಸಂಸ್ಥೆಗಳು ಮತ್ತು ಮಠಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅವರು ನಿಯಮಿತವಾಗಿ ನಾಟಕ ಪ್ರದರ್ಶಿಸುತ್ತಿದ್ದಾರೆ. ಆದರೆ, ನಾಟಕ ಪ್ರದರ್ಶನಕ್ಕಾಗಿ ನೀಡಲಾಗುವ ಪ್ರೋತ್ಸಾಹಧನ ಮೊತ್ತ ಕಡಿಮೆ ಇರುವುದು ಕಲಾವಿದರ ನಿರಾಸೆಗೆ ಕಾರಣವಾಗಿದೆ.

₹50 ಸಾವಿರ ನೀಡಲಿ: ‘ನಾವು ವರ್ಷಕ್ಕೆ 10ಕ್ಕೂ ಅಧಿಕ ನಾಟಕ ಪ್ರದರ್ಶಿಸುತ್ತೇವೆ. ಪೌರಾಣಿಕ ನಾಟಕಗಳಲ್ಲಿ 35ರಿಂದ 40 ಕಲಾವಿದರು ಅಭಿನಯಿಸುತ್ತಾರೆ. ಸಾಮಾಜಿಕ ನಾಟಕಗಳಲ್ಲಿ 15ರಿಂದ 20 ಕಲಾವಿದರು ಇರುತ್ತಾರೆ. ವೇಷಭೂಷಣ, ಅಲಂಕಾರ, ಪ್ರಯಾಣ ಮತ್ತಿತರ ಖರ್ಚುಗಳೆಲ್ಲ ಸೇರಿದರೆ, ಒಂದು ನಾಟಕಕ್ಕೆ ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ. ಎಲ್ಲ ಸಂದರ್ಭದಲ್ಲೂ ಸಾರ್ವಜನಿಕರಿಂದ ನಿರೀಕ್ಷೆಯಂತೆ ದೇಣಿಗೆ ಸಿಗುವುದಿಲ್ಲ. ಹಾಗಾಗಿ ಸರ್ಕಾರ ನಾಟಕಗಳ ಪ್ರದರ್ಶನಕ್ಕೆ ₹50 ಸಾವಿರ ಪ್ರೋತ್ಸಾಹಧನ ನೀಡಬೇಕು’ ಎಂದು ಮಲ್ಲನಗೌಡ ಪಾಟೀಲ ಒತ್ತಾಯಿಸಿದರು.

ನಾಟಕಗಳ ಪ್ರದರ್ಶನಕ್ಕಾಗಿ ನೀಡಲಾಗುವ ಪ್ರೋತ್ಸಾಹಧನ ಹೆಚ್ಚಳ ಸಂಬಂಧ ಕಲಾವಿದರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು
ವಿದ್ಯಾವತಿ ಭಜಂತ್ರಿ ಉಪನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ

ಅನುದಾನವೂ ಬಂದಿಲ್ಲ

‘ಜಿಲ್ಲೆಯಲ್ಲಿ ರಂಗ ಪ್ರಯೋಗಗಳನ್ನು ಮಾಡುವ ಸಂಘ–ಸಂಸ್ಥೆಗಳಿಗೆ ಸರ್ಕಾರ ಪ್ರತಿವರ್ಷ  ಅನುದಾನ ನೀಡುತ್ತಿತ್ತು. ಈ ವರ್ಷ ಅನುದಾನ ನೀಡುವುದಕ್ಕೂ ಅರ್ಜಿ ಕರೆದಿಲ್ಲ. ಆರ್ಥಿಕ ಮುಗ್ಗಟ್ಟಿನ ಮಧ್ಯೆಯೇ ಹೇಗೋ ನಾಟಕಗಳನ್ನು ಪ್ರದರ್ಶಿಸುತ್ತ ಹೊರಟಿದ್ದೇವೆ’ ಎಂದು ಸವದತ್ತಿಯ ರಂಗಕರ್ಮಿ ಝಕೀರ್‌ ನದಾಫ್‌ ಹೇಳುತ್ತಾರೆ.

ಇನ್ನೂ ನಿರ್ಮಾಣವಾಗದ ಸ್ಮಾರಕ!

ರಂಗಭೂಮಿಗೆ ಅನುಪಮ ಕೊಡುಗೆ ನೀಡಿದ ಏಣಗಿ ಬಾಳಪ್ಪ 2017ರ ಆಗಸ್ಟ್ 18ರಂದು ನಿಧನರಾದರು. ಆಗ ಅಂತ್ಯಕ್ರಿಯೆಗೆ ಆಗಮಿಸಿದ್ದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಬಾಳಪ್ಪ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಏಳು ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಬಾಳಪ್ಪನವರ ಹೆಸರಿನಲ್ಲಿ ಕುಟುಂಬಸ್ಥರೇ ರಚಿಸಿಕೊಂಡ ಟ್ರಸ್ಟ್‌ಗೂ ಅನುದಾನ ಸಿಗದಿರುವುದು ರಂಗಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ‘ಏಣಗಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾದರೆ ನಾವೇ ಜಾಗ ನೀಡಲು ಸಿದ್ಧರಿದ್ದೇವೆ’ ಎಂದು ಬಾಳಪ್ಪ ಅವರ ಪುತ್ರ ಸುಭಾಷ ಏಣಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಾಳಪ್ಪನವರ ಹೆಸರಿನಲ್ಲಿ ನಿರ್ಮಿಸುವ ಸ್ಮಾರಕ ಸದಾ ಕ್ರಿಯಾಶೀಲವಾಗಿರಬೇಕು. ಸುಸಜ್ಜಿತ ಸೌಕರ್ಯ ಒಳಗೊಂಡು ರಂಗ ಪ್ರಯೋಗಗಳಿಗೆ ಪೂರಕವಾಗಿರಬೇಕು. ಅದಕ್ಕಾಗಿ ಬೆಳಗಾವಿಯಲ್ಲೇ ಶೀಘ್ರದಲ್ಲಿ ಅದನ್ನು ನಿರ್ಮಿಸುವುದು ಸೂಕ್ತ’ ಎಂದು ಸಾಹಿತಿ ರಾಮಕೃಷ್ಣ ಮರಾಠೆ ಹೇಳಿದರು. ‘ಏಣಗಿ ಬಾಳಪ್ಪ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.