ADVERTISEMENT

ಸವದತ್ತಿ: ಕ್ರೀಡೆ ಪ್ರೋತ್ಸಾಹಿಸುವ ಹಂಚಿನಾಳ

ಮರೆಮ್ಮದೇವಿ ಜಾತ್ರೆ: ಶಾಸಕ ವಿಶ್ವಾಸ ವೈದ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 2:45 IST
Last Updated 12 ಜುಲೈ 2025, 2:45 IST
ಹಂಚಿನಾಳ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ಆಯೋಜಿಸಿದ ಕುಸ್ತಿ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು
ಹಂಚಿನಾಳ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ಆಯೋಜಿಸಿದ ಕುಸ್ತಿ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು   

ಸವದತ್ತಿ: ಕುಸ್ತಿ ಪಟುಗಳಿಗೆ ಪ್ರಸಿದ್ಧಿ ಪಡೆದ ಹಂಚಿನಾಳ ಗ್ರಾಮ ಇದೀಗ ಕೊಕ್ಕೊ ಸೇರಿ ಹಲವು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ, ಕ್ರೀಡಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಮರೆಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಜರುಗಿದ ಜಂಗಿ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಮೂರು ವರ್ಷಕ್ಕೊಮ್ಮೆ ಜರುಗುವ ಮರೆಮ್ಮದೇವಿ ಜಾತ್ರೆಯನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಕುಸ್ತಿ ಕೇವಲ ಕ್ರೀಡೆಯಲ್ಲ ಅದು ಗ್ರಾಮೀಣರ ಬದುಕು. ಗ್ರಾಮಸ್ಥರು ಕುಸ್ತಿ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಗ್ರಾಮದ ಬಹುಬೇಡಿಕೆಯ ಆರೋಗ್ಯ ಕೇಂದ್ರ ಸ್ಥಾಪಿಸಲು ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ಬೆಂಗಳೂರು ಉತ್ತರ ವಲಯ ಅಬಕಾರಿ ಜಂಟಿ ಆಯುಕ್ತ ಎಫ್.ಎಚ್. ಚಲವಾದಿ, ಬೆಂಗಳೂರು ಹಲಸೂರ ಗೇಟ್ ಎಸಿಪಿ ಶಿವಾನಂದ ಚಲವಾದಿ ಮಾತನಾಡಿದರು. ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ, ಚಿಕ್ಕುಂಬಿಯ ಅಜಾತ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಾ.ಸಿ.ಬಿ.ನಾವದಗಿ ಸೇರಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಶೆಟ್ಟೆಪ್ಪ ನಡಕಟ್ಟಿನ, ಹೊನ್ನಪ್ಪ ನಡಕಟ್ಟಿನ, ಕಾಶಪ್ಪ ಗೋವನ್ನವರ, ಸುನೀಲ ಚಲವಾದಿ, ಲೋಕೇಶ ಶಿರಣ್ಣವರ, ಜಿ.ಎಸ್. ಗಂಗಲ, ಕಲ್ಮೇಶ ರೂಗಿ, ಗೋವಿದಂಪ್ಪ ಶ್ರೀಹರಿ, ಸೈದಯಸಾಬ್ ಕುಳ್ಳೂರ, ಭಸಲಿಂಗಪ್ಪ ಭಿಂಗಿ, ಯಲ್ಲವ್ವ ಮಾದರ, ಯಮನಪ್ಪ ಆಯಟ್ಟಿ, ಲಕ್ಷ್ಮಪ್ಪ ಗಾಣಿಗೇರ, ದೇವು ನಡಕಟ್ಟಿನ ಹಾಗೂ ಪ್ರಮುಖರು ಇದ್ದರು.

ಕಣ್ಮನ ಸೆಳೆದ ಜಟ್ಟಿ ಕಾಳಗ: ಮರೆಮ್ಮದೇವಿ ಜಾತ್ರೆ ಅಂಗವಾಗಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ, ಹರಿಯಾಣ ಸೇರಿ ವಿವಿಧ ರಾಜ್ಯಗಳಿಂದ 43 ಜಟ್ಟಿಗಳು ಪಾಲ್ಗೊಂಡಿದ್ದರು. ಕುಸ್ತಿ ಅಖಾಡದಲ್ಲಿ ಜಟ್ಟಿಗಳ ದಾಳಿ, ಬಿಗಿ ಹಿಡಿತ, ಪ್ರತಿರೋಧಗಳು ನೆರೆದ ಪ್ರೇಕ್ಷರನ್ನು ರಂಜಿಸಿತು.

ಮೊದಲನೇ ಕುಸ್ತಿ ಪಂದ್ಯದಲ್ಲಿ ಮಹಾರಾಷ್ಟದ ಮಾವುಲಿ ಜಮದಾಳಿ, ಹರಿಯಾಣದ ಸೋನು ಕುಮಾರ ನಡುವೆ ಭರ್ಜರಿ ಕಾದಾಟ ನಡೆಯಿತು. ಕೊನೆಗೆ ಮಾವುಳಿ ಜಮದಾಳಿ ವಿಜೇತರಾದರು. ಎರಡನೇ ಕುಸ್ತಿಯಲ್ಲಿ ಕೊಲ್ಲಾಪುರದ ನಾಗರಾಜ ಬಸಿಡೋಣಿ ಅವರನ್ನು ಕರ್ನಾಟಕ ಕೇಸರಿ ಅಡಾಳಟ್ಟಿಯ ಶಿವಯ್ಯ ಪೂಜಾರ ಮಣಿಸಿದರು. ಮೂರನೇ ಕುಸ್ತಿಯಲ್ಲಿ ಧಾರವಾಡದ ವರಮಾನ ಇಂಗಳಗಿ ಮತ್ತು ಕೊಲ್ಲಾಪುರದ ಋಷಿ ಪಾಟೀಲ ಸಮಬಲ ಕಾಯ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.