ADVERTISEMENT

‘ಯಮ ಸಲ್ಲೇಖನ ವ್ರತ’ ಘೋಷಿಸಿದ ಚಿನ್ಮಯಸಾಗರ ಮುನಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 18:23 IST
Last Updated 13 ಅಕ್ಟೋಬರ್ 2019, 18:23 IST
ಚಿನ್ಮಯಸಾಗರ ಮುನಿ
ಚಿನ್ಮಯಸಾಗರ ಮುನಿ   

ಮೋಳೆ (ಬೆಳಗಾವಿ ಜಿಲ್ಲೆ): ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಚಾತುರ್ಮಾಸ ಆಚರಣೆಯಲ್ಲಿರುವ, ‘ರಾಷ್ಟ್ರಸಂತ’ ಎಂದೇ ಖ್ಯಾತರಾದ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಶನಿವಾರದಿಂದ ‘ಯಮ ಸಲ್ಲೇಖನ ವ್ರತ’ ಸ್ವೀಕರಿಸಿರುವುದಾಗಿ ಪ್ರಕಟಿಸಿದ್ದಾರೆ. ಅವರು 25 ದಿನಗಳಿಂದ ‘ನಿಯಮ ಸಲ್ಲೇಖನ’ ವ್ರತ ಪಾಲಿಸುತ್ತಿದ್ದರು. ಈಗ, ಜೈನ ಧರ್ಮದ ಅನುಸಾರ ಶರೀರ ತ್ಯಾಗಕ್ಕೆ ನಿರ್ಧಾರಕ್ಕೆ ಬಂದಿದ್ದಾರೆ.

ಮೋಕ್ಷಕ್ಕಾಗಿ ಶರೀರ ತ್ಯಾಗ ಮಾಡಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ದೇಹ ಸ್ಥಿತಿಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇನ್ಮುಂದೆ ನೀರನ್ನೂ ಸೇವಿಸದೇ ವ್ರತ ಆಚರಿಸುತ್ತೇನೆ ಎಂದು ಭಕ್ತರಿಗೆ ತಿಳಿಸಿದ್ದಾರೆ. ಹೀಗಾಗಿ, ಅವರ ದರ್ಶನ ಪಡೆಯಲು ನೂರಾರು ಭಕ್ತರು, ಮುನಿಗಳು ಮತ್ತು ಸ್ವಾಮೀಜಿಗಳು ಜುಗೂಳಕ್ಕೆ ಬರುತ್ತಿದ್ದಾರೆ.

ಹಂತ ಹಂತವಾಗಿ ಆಹಾರ, ನೀರು ಹಾಗೂ ದ್ರವ ವಸ್ತುಗಳನ್ನು ತ್ಯಜಿಸುತ್ತಾ ಕೊನೆಗೆ ಸಂಪೂರ್ಣವಾಗಿ ಎಲ್ಲವನ್ನೂ ತ್ಯಜಿಸಿ ಮನವನ್ನು ಗಟ್ಟಿಗೊಳಿಸಿಕೊಂಡು ಪರಮಾತ್ಮನತ್ತ ಸಾಗುವುದೇ ಯಮಸಲ್ಲೇಖನ ವ್ರತವಾಗಿದೆ.

ADVERTISEMENT

ಮೂರು ದಶಕಗಳಿಂದ ದೇಶದಾದ್ಯಂತ ವಿಹರಿಸಿರುವ ಅವರು, ಸಾವಿರಾರು ಕಾಡು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದ್ದಾರೆ. ತಮ್ಮ ಹೆಚ್ಚಿನ ಹೆಚ್ಚು ಚಾತುರ್ಮಾಸಗಳನ್ನು ಕಾಡಿನಲ್ಲಿಯೇ ಪೂರೈಸಿದ ಶ್ರೇಯಸ್ಸು ಅವರದು. ಉತ್ತರ ಭಾರತದ ಅನೇಕ ಗ್ರಾಮಗಳಲ್ಲಿ ಸುತ್ತಾಡಿ ಎಲ್ಲ ಧರ್ಮೀಯರಲ್ಲೂ ಧಾರ್ಮಿಕ ಮನೋಭಾವ ಬೆಳೆಸಿ ಅವರು ಸನ್ಮಾರ್ಗದತ್ತ ಸಾಗಲು ಪ್ರೇರೇಪಿಸಿದ್ದಾರೆ.

ಜುಗೂಳದಲ್ಲಿ ಜನಿಸಿದ ಅವರು, ಜೈನ ಧರ್ಮದ ಅಹಿಂಸಾ ತತ್ವಗಳಿಗೆ ಆಕರ್ಷಿತರಾಗಿ 1988ರ ಮಾರ್ಚ್‌ 31ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ‍‍ಪಡೆದಿದ್ದಾರೆ. ರಾಜಸ್ತಾನ, ಉತ್ತರಪ್ರದೇಶ, ದೆಹಲಿ ಮೊದಲಾದ ಕಡೆಗಳಲ್ಲಿ ತಲಾ 2 ವರ್ಷ, ಮಧ್ಯಪ್ರದೇಶದಲ್ಲಿ 15 ವರ್ಷ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 5 ವರ್ಷಗಳವರೆಗೆ ಗಿರಿಜನರು ಮತ್ತು ವಿವಿಧ ಸಮುದಾಯಗಳ ಜನರಿಗೆ ಅಹಿಂಸಾ ತತ್ವಗಳನ್ನು ಬೋಧಿಸಿದ್ದಾರೆ. ಸಾವಿರಾರು ಮಂದಿಯನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ ಸೇವೆ ಮಾಡಿದ್ದಾರೆ.

ಏನಿದು ಯಮ ಸಲ್ಲೇಖನ ವ್ರತ: ‘ಹಂತ ಹಂತವಾಗಿ ಆಹಾರ, ನೀರು ತ್ಯಜಿಸುತ್ತಾ ಕೊನೆಗೆ ಎಲ್ಲವನ್ನೂ ತ್ಯಜಿಸಿ ಮನವನ್ನು ಗಟ್ಟಿಗೊಳಿಸಿಕೊಂಡು ಪರಮಾತ್ಮನತ್ತ ಸಾಗುವುದೇ ಯಮಸಲ್ಲೇಖನ ವ್ರತ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.