ADVERTISEMENT

ಮೂಡಲಗಿ: ಬೀಸನಕೊಪ್ಪದ ಯಮನಪ್ಪ ‘ಕ್ರೀಡಾ ರತ್ನ’

ಗುಂಡು ಕಲ್ಲು ಎತ್ತುವುದರಲ್ಲಿ ಸಾಧನೆ

ಬಾಲಶೇಖರ ಬಂದಿ
Published 3 ನವೆಂಬರ್ 2020, 14:44 IST
Last Updated 3 ನವೆಂಬರ್ 2020, 14:44 IST
ಯಮನಪ್ಪ ಕಲ್ಲೋಳಿ
ಯಮನಪ್ಪ ಕಲ್ಲೋಳಿ   

ಮೂಡಲಗಿ: ತಾಲ್ಲೂಕಿನ ಬೀಸನಕೊಪ್ಪದ ಯಮನಪ್ಪ ಮಾಯಪ್ಪ ಕಲ್ಲೋಳಿ ಅವರು ಗುಂಡು ಕಲ್ಲು ಎತ್ತುವ ಗ್ರಾಮೀಣ ಕ್ರೀಡೆಯಲ್ಲಿ ಮಾಡಿರುವ ಸಾಧನೆಗೆ ರಾಜ್ಯ ಸರ್ಕಾರದಿಂದ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹ 1 ಲಕ್ಷ ಚೆಕ್‌, ಫಲಕ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಿದ್ದಾರೆ.

ಸಾಧನೆ: 12 ವರ್ಷಗಳಿಂದ ಗುಂಡು ಕಲ್ಲು ಎತ್ತುವುದನ್ನು ರೂಢಿಸಿಕೊಂಡು ಬಂದಿರುವ ಯಮನಪ್ಪ ನೂರಾರು ಕಡೆಯಲ್ಲಿ ಈ ದೇಸಿ ಕ್ರೀಡೆ ಪ್ರದರ್ಶಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ ಮತ್ತು ಪ್ರಶಸ್ತಿ–ಸನ್ಮಾನಗಳಿಗೆ ಭಾಜನವಾಗಿದ್ದಾರೆ.

ADVERTISEMENT

90 ಕೆ.ಜಿ.ಯಿಂದ ಹಿಡಿದು 175 ಕೆ.ಜಿ. ತೂಕದವರೆಗಿನ ಕಲ್ಲಿನ ಗುಂಡು ಎತ್ತಿ ದಾಖಲೆ ಮಾಡಿದ್ದಾರೆ. ಹಂಪಿ ಉತ್ಸವ, ಕಿತ್ತೂರ ಉತ್ಸವ ಹಾಗೂ ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಜಾತ್ರೆ, ಹಬ್ಬ, ಉತ್ಸವ ಮೊದಲಾದ ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ್ದಾರೆ.

ತಂದೆ ಪ್ರೇರಣೆ: ‘ನಾವಲಗಿ ಜಾತ್ರ್ಯಾಗ ಗುಂಡಕಲ್ಲ ಎತ್ತೋದು ನೋಡಿ ನಾನು ಅವರಂಗ ಎತ್ತಬೇಕು ಅಂತ ಮನಸ್ಸನ್ಯಾಗ ಆತ್ರೀ. ಊರಿಗೆ ಬಂದು 90 ಕೆ.ಜಿ.ಯ ಗುಂಡು ಕಲ್ಲನ್ನು ಎತ್ತೋದು ತಾಲೀಮ ಶುರು ಮಾಡಿದೆ. ನಮ್ಮಪ್ಪ 90 ಬ್ಯಾಡಾ, 130 ಕೆ.ಜಿ. ಗುಂಡ ಎತ್ತಿ ಒಗೀ ಎಂದು ದಿನಾಲೂ ಹುರುಪ ಹಾಕುತ್ತಿದ್ದರು. ಒಂದು ದಿನಾ 130 ಕೆ.ಜಿ.ಯ ಗುಂಡನ್ನು ಎತ್ತಿ ಒಗೆದು ನಮ್ಮಪ್ಪನ ಕಡೆಯಿಂದ ಶಬ್ಬಾಶ ಅನ್ನಿಸಿಕೊಂಡಿನ್ರೀ’ ಎಂದು ಸಾಧನೆಯ ಹಿನ್ನೆಲೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

90ರಿಂದ 175 ಕೆ.ಜಿ. ವರೆಗಿನ 14 ವಿವಿಧ ತೂಕದ ಕಲ್ಲುಗಳನ್ನು ಸಲೀಸಾಗಿ ಎತ್ತಿ ಹಾಕುವುದನ್ನು ಕಂಡು ಜನ ಬೆರಗಾಗುತ್ತಾರೆ. ಚಪ್ಪಾಳೆ, ಸಿಳ್ಳೆಗಳ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ‘ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೇಸಿ ಕ್ರೀಡೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ’ ಎನ್ನುತ್ತಾರೆ.

‘ಶಾಲೆ ಕಟ್ಟೆ ಹತ್ತದ ಯಮನಪ್ಪ ಸದ್ಯ ಬೀಸನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಶಾಲೆಯ ಪ್ರಗತಿ ಮಾಡುತ್ತಿದ್ದಾರೆ. ಕೃಷಿ ಕಾಯಕ ಅವರದು. ಗುಂಡು ಎತ್ತುವ ಕಸರತ್ತನ್ನು ಗ್ರಾಮದ ಯುವಕರಿಗೆ ಕಲಿಸುವ ಮೂಲಕ ದೇಸಿ ಕ್ರೀಡೆ ಬೆಳೆಸುತ್ತಿದ್ದಾರೆ. ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ದೊರೆತಿದ್ದು ನಮ್ಮೂರಿಗೆ ದೊಡ್ಡ ಕೀರ್ತಿ ಬಂದೈತ್ರೀ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಬಸಪ್ಪ ಸಾರಾಪುರ, ಅರ್ಜುನ ಜಿಡ್ಡಿಮನಿ, ದುಂಡಪ್ಪ ಕಲ್ಲಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.