ADVERTISEMENT

ಎಸ್‌ಡಿಪಿಐ, ಪಿಎಫ್‌ಐ ಬಿಜೆಪಿಯ ‘ಬಿ’ ಟೀಂಗಳು: ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 17:08 IST
Last Updated 29 ಸೆಪ್ಟೆಂಬರ್ 2022, 17:08 IST
   

ಮೈಸೂರು: ‘ಎಸ್‌ಡಿಪಿಐ ಮತ್ತು ಪಿಎಫ್‌ಐ ಎರಡೂ‌ ಬಿಜೆಪಿಯ ‘ಬಿ’ ಟೀಂಗಳು’ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಆ ಸಂಘಟನೆಗಳಿಂದಾಗಿಯೇ ಕೋಮುವಾದಿ ಬೇಳೆ ಬೇಯುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿಯವರಿಗೆ ನಿಜವಾಗಿಯೂ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಪಿಎಫ್‌ಐ ಸಂಘಟನೆ ನಿಷೇಧಿಸಬೇಕಿತ್ತು. ಆದರೆ, ಚುನಾವಣೆ ಸಮೀಪ ಬರುವಾಗ ಗಿಮಿಕ್ ಮಾಡುತ್ತಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಆಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಭಾರತ್ ಜೋಡೊ ಯಾತ್ರೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿಯೇ ಗುಂಡ್ಲುಪೇಟೆಯಲ್ಲಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆ ಉರಿಯುತ್ತಿದೆ’ ಎಂದು ಟೀಕಿಸಿದರು.

ದಸರಾದಲ್ಲಿ ಅವ್ಯವಸ್ಥೆ: ಆರೋಪ

‘ನಾಡಹಬ್ಬ ದಸರೆಯಲ್ಲೂ ಕಮಿಷನ್‌ ದಂಧೆ ನಡೆಯುತ್ತಿರುವುದು ನನಗೂ ಕೇಳಿಬಂದಿದೆ. ಸಾಕಷ್ಟು ಅವ್ಯವಸ್ಥೆಗಳೂ ಕಂಡುಬಂದಿವೆ. ಇದರಿಂದ ಮೈಸೂರಿನ ಮಾನ ಹೋಗಿದೆ. ಈ ಬಾರಿ ವ್ಯವಸ್ಥಿತವಾಗಿ ದಸರಾ ನಡೆಸಲು ಸರ್ಕಾರ ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅವರೇ ನೇರ ಹೊಣೆಗಾರರು’ ಎಂದು ಹೇಳಿದರು.

ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಸ್.ಟಿ.ಸೋಮಶೇಖರ್‌, ‘ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿ ಬಣ್ಣದೇ ಆಗಿರುತ್ತದೆ. ದಸರೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಯಾವುದೇ ಲೋಪ‌ ಕಂಡುಬಂದರೂ, ಕೂಡಲೇ ಸರಿಪಡಿಸುತ್ತಿದ್ದೇವೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.