
ಸವದತ್ತಿ: ‘ಬನದ ಹುಣ್ಣಿಮೆ ಮತ್ತು ಭರತ ಹುಣ್ಣಿಮೆ ಪ್ರಯುಕ್ತ ನಡೆಯುವ ಜಾತ್ರೆಯಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಿ ಜಾತ್ರೆ ಯಶಸ್ವಿಗೊಳಿಸಬೇಕು’ ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.
ಯಲ್ಲಮ್ಮ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಜನವರಿ 1ರಿಂದ ಫೆಬ್ರುವರಿ 8ರವರೆಗೆ ಎರಡೂ ಹುಣ್ಣಿಮೆಗಳ ಜಾತ್ರೆ ನೆರವೇರುತ್ತವೆ. ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು’ ಎಂದರು.
‘ಎಲ್ಲ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರು ಒದಗಿಸಬೇಕು. ನೀರಿನ ಕೊರತೆಯಾದರೆ ಹೆಚ್ಚುವರಿಯಾಗಿ ಬಹುಗ್ರಾಮ ಕುಡಿಯುವ ಯೋಜನೆ ನೀರು ಬಳಸಿಕೊಳ್ಳಬೇಕು. ನೀರು ತಲುಪದ ಕಡೆ ಟ್ಯಾಂಕರ್ ವ್ಯವಸ್ಥೆ ಒದಗಿಸಬೇಕು’ ಎಂದು ನಿರ್ದೇಶನ ಕೊಟ್ಟರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿದ್ದು ಹುಲ್ಲೊಳ್ಳಿ, ‘ಗುಡ್ಡದಲ್ಲಿ ವ್ಯಾಪಾರಕ್ಕಾಗಿ 10x10 ಉದ್ದಗಲದ ಅಳತೆಯ 365 ಜಾಗ ಗುರುತಿಸಲಾಗಿದೆ. ಅರ್ಜಿ ಸಲ್ಲಿಸಿ ₹25 ಸಾವಿರ ಶುಲ್ಕ ಪಾವತಿಸಿದ ಅಂಗಡಿಕಾರರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ‘ನಮ್ಮ ಕ್ಲಿನಿಕ್‌ಗೆ ಅಗತ್ಯವಿರುವ ಕೊಠಡಿಯನ್ನು ದೇವಸ್ಥಾನದಿಂದ ನೀಡಬೇಕು. ಜಾತ್ರೆ ವೇಳೆ ನಕಲಿ ವೈದ್ಯರ ಹಾವಳಿ ಹೆಚ್ಚುತ್ತದೆ. ಪ್ರಾಧಿಕಾರದಿಂದ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ಉಪ ಕಾರ್ಯದರ್ಶಿ ನಾಗರತ್ನಾ ಚೋಳಿನ ಮಾತನಾಡಿದರು. ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಬೆಂಡೆಗುಂಬಳ, ಎಚ್.ಎಂ.ಮಲ್ಲನಗೌಡ್ರ, ಲಕ್ಷ್ಮಣ ಗೌಡಿ, ಮಂಜುನಾಥ ಪವಾರ, ಶಿವಾನಂದ ಪಟ್ಟಣಶೆಟ್ಟಿ, ಸಿದ್ದನಗೌಡ ಗೂಡರಾಶಿ, ಮಂಜುನಾಥ ಪವಾರ ಇದ್ದರು.
ಜಾತ್ರೆ ವೇಳೆ ಸ್ಥಳೀಯ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಕ್ರಮ ವಹಿಸಬೇಕುಚಿದಂಬರ ಮಡಿವಾಳರ ಡಿವೈಎಸ್‌ಪಿ
‘ನಿಗಾ ವಹಿಸಲಾಗುವುದು’
‘ಎಣ್ಣೆಹೊಂಡ ದೇವಸ್ಥಾನದ ಸುತ್ತಲಿನ ಪರಿಸರದಲ್ಲಿ ಕಳ್ಳತನ ಹೆಚ್ಚಿದ ಕಾರಣ ತಾತ್ಕಾಲಿಕ ವಾಚ್ ಟವರ್ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗುವುದು. ಬಸ್ ನಿಲ್ದಾಣ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು’ ಎಂದು ಸಿದ್ದು ಹುಲ್ಲೊಳ್ಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.