
ಸವದತ್ತಿ: ತಾಲ್ಲೂಕಿನ ಯಲ್ಲಮ್ಮನಗುಡ್ಡ ಶನಿವಾರ, ಬನದ ಹುಣ್ಣಿಮೆ ಪ್ರಯುಕ್ತ ಬೃಹತ್ ಜಾತ್ರೆಗೆ ಸಾಕ್ಷಿಯಾಯಿತು. ಆದರೆ, ಸಂಚಾರ ಸಮಸ್ಯೆ ಈ ವರ್ಷವೂ ಭಕ್ತರನ್ನು ಬಿಟ್ಟುಬಿಡದೆ ಕಾಡಿತು.
‘ತಿರುಪತಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡ ಅಭಿವೃದ್ಧಿಪಡಿಸುತ್ತೇವೆ’ ಎನ್ನುವ ಸರ್ಕಾರಕ್ಕೆ ಈ ಬಾರಿಯೂ ಸಂಚಾರದಟ್ಟಣೆ ನಿಯಂತ್ರಿಸಲು ಆಗಲಿಲ್ಲ. 10 ಲಕ್ಷಕ್ಕಿಂತ ಅಧಿಕ ಭಕ್ತರು ಆಗಮಿಸಿದ್ದರೂ, ಬೇಡಿಕೆಯಷ್ಟು ಪೊಲೀಸರು ಇರಲಿಲ್ಲ.
ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಕಣ್ಣು ಹಾಯಿಸಿದಷ್ಟು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ರಸ್ತೆಯಲ್ಲೇ ಹೆಚ್ಚಿನ ಸಮಯ ಕಳೆದ ಭಕ್ತರು, ದೇವಸ್ಥಾನ ತಲುಪುವಷ್ಟರಲ್ಲಿ ಬಸವಳಿದು ಹೋದರು.
ಉಗರಗೋಳ ನಾಕಾದ ಬಳಿ ರಸ್ತೆ ವಿಭಜಕ ಇದ್ದು, ಸಾರಿಗೆ ಸಂಸ್ಥೆಯ ಬಸ್‌ಗಳು ತಿರುವು ಪಡೆಯಲು ಸ್ಥಳಾವಕಾಶ ಇರಲಿಲ್ಲ. ಚಕ್ಕಡಿ, ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.
ಜಾತ್ರೆ ವೇಳೆ ಸಂಚಾರ ಸಮಸ್ಯೆ ನಿರ್ವಹಣೆಗೆ ರಸ್ತೆ ವಿಸ್ತರಣೆಯೊಂದೇ ದಾರಿ. ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಇದಕ್ಕೆ ಆದ್ಯತೆ ಕೊಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಬದಿ ವಾಹನ ನಿಲ್ಲಿಸಿದ್ದೇವೆ. ಇಲ್ಲಿ ಸಮರ್ಪಕವಾಗಿ ಮೂಲಸೌಕರ್ಯವೂ ಇಲ್ಲ ಭೀಮಣ್ಣ ಹೇರೂರು ಭಕ್ತ
ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವ ಕಾರಣ ಸಂಚಾರ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿಲ್ಲಹುಸೇನ್ ಜಕಾತಿ ಆಟೊ ಚಾಲಕ
ಯಲ್ಲಮ್ಮಗುಡ್ಡದಲ್ಲಿ ಸರಿಯಾಗಿ ಪಾರ್ಕಿಂಗ್ ಸೌಲಭ್ಯವಿಲ್ಲ. ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗಳು ಕಿರಿದಾದ ಕಾರಣ ಸಂಚಾರ ಸಮಸ್ಯೆ ಮಿತಿಮೀರುತ್ತಿದೆಮಲ್ಲು ಬೀಳಗಿ ಸ್ಥಳೀಯರು ಸವದತ್ತಿ
ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಬದಿ ವಾಹನ ನಿಲ್ಲಿಸಿದ್ದೇವೆ. ಇಲ್ಲಿ ಸಮರ್ಪಕವಾಗಿ ಮೂಲಸೌಕರ್ಯವೂ ಇಲ್ಲಭೀಮಣ್ಣ ಹೇರೂರು ಭಕ್ತ
ಮೈಕೊರೆಯುವ ಚಳಿಯಲ್ಲೂ ಭಕ್ತಿ ಸಮರ್ಪಣೆ
ಈ ಜಾತ್ರೆಗೆ ಕರ್ನಾಟಕಕ್ಕಿಂತ ಮಹಾರಾಷ್ಟ್ರದಿಂದಲೇ ಹೆಚ್ಚಿನ ಭಕ್ತರು ಆಗಮಿಸಿದ್ದರು. ಮೈಕೊರೆಯುವ ಚಳಿ ಮಧ್ಯೆಯೂ ಶ್ರದ್ಧೆಯಿಂದ ಧಾರ್ಮಿಕ ಆಚರಣೆ ಕೈಗೊಂಡರು. ‘ಎಲ್ಲರ ಅಮ್ಮ’ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶನಿವಾರ ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿತು. ನಸುಕಿನಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆದರು. ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು. ಪುರುಷರು ಮತ್ತು ಮಹಿಳೆಯರಿಗೆ ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ನಂತರ ರಸ್ತೆಬದಿ ಮತ್ತು ಗುಡ್ಡದ ವಿಶಾಲವಾದ ಪರಿಸರದಲ್ಲಿ ನೈವೇದ್ಯ ಸಿದ್ಧಪಡಿಸಿ ಪರಡಿ ತುಂಬಿ ಭಕ್ತಿ ಸಮರ್ಪಿಸಿದರು. ಜೋಗತಿಯರ ನೃತ್ಯ ಜಾನಪದ ಕಲಾತಂಡಗಳ ಪ್ರದರ್ಶನ ಭಕ್ತರನ್ನು ಸೆಳೆಯಿತು. ಯಲ್ಲಮ್ಮನ ಇತಿಹಾಸ ಸಾರುವ ಗೀತೆಗಳು ಮತ್ತು ಭಕ್ತಿಗೀತೆಗಳಿಗೆ ಯುವಜನರು ಉತ್ಸಾಹದಿಂದ ಹೆಜ್ಜೆಹಾಕಿದರು. ಭಂಡಾರದಲ್ಲಿ ಮಿಂದೆದ್ದ ಯುವಜನರು ದೇವಸ್ಥಾನದ ಮೇಲೂ ಭಂಡಾರ ಹಾರಿಸಿ ಸಂಭ್ರಮಿಸಿದರು. ತೆಂಗಿನಕಾಯಿ ಕರ್ಪೂರ ಕುಂಕುಮ–ಭಂಡಾರ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.