ADVERTISEMENT

ಬೆಳಗಾವಿ: ಪ್ರಿಯತಮೆ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 8:13 IST
Last Updated 22 ಜುಲೈ 2022, 8:13 IST
ಬೆಳಗಾವಿಯ ಬಸವ ಕಾಲೊನಿಯಲ್ಲಿ ಪ್ರೇಮಿಗಳಿಬ್ಬರ ಸಾವು ಸಂಭವಿಸಿದ ಮನೆಯಲ್ಲಿ ಪೊಲೀಸರು ಪಂಚನಾಮೆ ನಡೆಸಿದರು
ಬೆಳಗಾವಿಯ ಬಸವ ಕಾಲೊನಿಯಲ್ಲಿ ಪ್ರೇಮಿಗಳಿಬ್ಬರ ಸಾವು ಸಂಭವಿಸಿದ ಮನೆಯಲ್ಲಿ ಪೊಲೀಸರು ಪಂಚನಾಮೆ ನಡೆಸಿದರು   

ಬೆಳಗಾವಿ: ಇಲ್ಲಿನ ಬಸವ ಕಾಲೊನಿಯಲ್ಲಿ ಗುರುವಾರ ರಾತ್ರಿ ಪ್ರೇಯಸಿಯನ್ನು ಕತ್ತು ಬಿಗಿದು ಕೊಲೆ ಮಾಡಿದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ನಿವಾಸಿ ರಾಮಚಂದ್ರ ತೆಣಗಿ (29) ಹಾಗೂ ಮದ್ಲೂರು ಮೂಲದ ರೇಣುಕಾ ಪಚ್ಚಣ್ಣವರ (30) ಮೃತಪಟ್ಟವರು.

ರೇಣುಕಾ ಅವರ ಕುತ್ತಿಗೆಗೆ ಸ್ಕಿಪ್ಪಿಂಗ್ ವೈರಿನಿಂದ ಬಿಗಿದು ಕೊಲೆ ಮಾಡಿದ ಆರೋಪಿ, ಅದೇ ವೈರಿನಿಂದ ತಾನೂ ನೇಣಿಗೆ ಶರಣಾಗಿದ್ದಾನೆ.

ADVERTISEMENT

ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಮಚಂದ್ರ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.

ರಾಮಚಂದ್ರ ತೆಣಗಿ ವಿಶ್ವವಿದ್ಯಾಲಯದ ಹಾಸ್ಟೆಲಿನಲ್ಲಿ ವಾಸವಾಗಿದ್ದ. ರೇಣುಕಾ ಅವರುಬಸವ ಕಾಲೊನಿಯ ಮನೆಯೊಂದರಲ್ಲಿ ಒಬ್ಬರೇ ಬಾಡಿಗೆ ಮಾಡಿಕೊಂಡಿದ್ದರು.

ಗುರುವಾರ ರಾತ್ರಿ ಪ್ರೇಮಿಗಳಿಬ್ಬರೂ ಇದೇ ಮನೆಯಲ್ಲಿ ಮಾತನಾಡಲು ಸೇರಿದ್ದರು.

ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಮಚಂದ್ರ ತನ್ನ ಸೋದರಮಾವನಿಗೆ ರಾತ್ರಿ ಮೆಸೇಜ್ ಹಾಕಿದ್ದ. ಅದನ್ನು ನೋಡಿ ಶುಕ್ರವಾರ ಬೆಳಿಗ್ಗೆ ಯುವತಿಯ ರೂಮಿನ ಹತ್ತಿರ ಬಂದಾಗ ವಿಷಯ ಗೊತ್ತಾಗಿದೆ.

ಡೆತ್ ನೋಟ್ ಪತ್ತೆ:ಪ್ರೇಮಿಗಳಿಬ್ಬರ ಶವದ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. "ನನ್ನನ್ನು ಮರೆತುಬಿಡು" ಎಂದು ರೇಣುಕಾ ಹೇಳಿದ್ದರಿಂದ ಮನನೊಂದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ರವೀಂದ್ರ ಗಡಾದಿ ಹಾಗೂ ಎಪಿಎಂಸಿ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶವಗಳನ್ನು ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು.

ಪೊಲೀಸ್‌ ಆಗುತ್ತೇನೆಂದು ಬಂದವನು ಹೆಣವಾದ: ತಂದೆಯ ಕಣ್ಣೀರು

ತನ್ನ ಪ್ರೀತಿಯ ಬಗ್ಗೆ ಮಗ ನಮ್ಮ ಬಳಿ ಏನನ್ನೂ ಹೇಳಿಲ್ಲ. ಹೇಳಿದ್ದರೆ ಏನಾದರೂ ಸಹಾಯ ಮಾಡುತ್ತಿದ್ದೆವು. ಪೊಲೀಸ್‌ ಆಫೀಸರ್‌ ಆಗುತ್ತಾನೆ ಎಂದು ಕನಸು ಕಂಡಿದ್ದೆ. ಈಗ ಅವನೇ ಹೆಣವಾಗಿದ್ದಾನೆ...

ಬೆಳಗಾವಿಯ ಬಸವನಗರದಲ್ಲಿ ‍ಪ್ರೇಯಸಿಯನ್ನು ಕೊಲೆ ಮಾಡಿ ತಾನೂ ನೇಣು ಹಾಕಿಕೊಂಡ ರಾಮಚಂದ್ರ ತೆಣಗಿ ಅವರ ತಂದೆ ಬಸವಂತ ಅವರ ನೋವಿನ ಮಾತುಗಳಿವು.

ಮಗನ ಸಾವಿನ ಸುದ್ದಿ ಕೇಳಿ ಶುಕ್ರವಾರ ಬೆಳಿಗ್ಗೆ ನಗರಕ್ಕೆ ಬಂದ ಅವರು, ‍ಪ್ರೇಮಿಗಳ ಶವಗಳನ್ನು ನೋಡಿ ಕಣ್ಣೀರಾದರು.

‘ಆ ಹುಡುಗಿ ಕೂಡ ನಮ್ಮ ಸಮುದಾಯದವಳೇ. ಒಳ್ಳೆಯ ಹುಡುಗಿ. ನಮಗೆ ಪರಿಚಯಸ್ಥರ ಕುಟುಂಬ. ಅವಳಾದರೂ ನಮ್ಮ ಮುಂದೆ ಹೇಳಿಕೊಂಡಿದ್ದರೆ ಇಂದು ಇಬ್ಬರೂ ಬದುಕಿರುತ್ತಿದ್ದರು’ ಎಂದು ದುಃಖಿಸಿದರು.

‘ಪೊಲೀಸ್‌ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿಯೂ ಮಗ ‍ಪಾಸಾಗಿದ್ದ. ಅವನು ಪೊಲೀಸ್‌ ಇಲಾಖೆ ಸೇರುತ್ತಾನೆ ಎಂದು ನಂಬಿದ್ದೆವು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂ.ಎ ಓದುತ್ತೇನೆ ಎಂದ. ಹಾಗಾಗಿ, ಹಾಸ್ಟೆಲ್‌ನಲ್ಲಿ ಇರಲು ಹೇಳಿದ್ದೆವು. ಕಳೆದ ಮಂಗಳವಾರವೇ ಊರಿಗೆ ಬಂದಿದ್ದ. ಯಾವುದೋ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಅದೇ ದಿನ ಬೆಳಗಾವಿಗೆ ಮರಳಿದ್ದ’ ಎಂದೂ ತಿಳಿಸಿದರು.

‘ಗುರುವಾರ ಸಂಜೆ 4ಕ್ಕೆ ನಾನು ಫೋನ್‌ ಮಾಡಿದಾಗ ಹೆಚ್ಚಿಗೆ ಮಾತನಾಡಲಿಲ್ಲ. ಆಮೇಲೆ ಮಾಡುತ್ತೇನೆ ಎಂದು ಹೇಳಿ ಕರೆ ಕಟ್‌ ಮಾಡಿದ್ದ. ರಾತ್ರಿ ಅವರ ಮಾವನಿಗೆ ಏನೋ ಮೆಸೇಜ್‌ ಹಾಕಿದ್ದನಂತೆ. ಬೆಳಿಗ್ಗೆ ನೋಡಿದರೆ ದುರಂತ ಮಾಡಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.