ಬೆಳಗಾವಿ: ‘ರಾಜ್ಯ ಸರ್ಕಾರ ಎಲ್ಲ ಸಮುದಾಯದ ಬಡವರು ಹಾಗೂ ಶೋಷಿತರ ಏಳ್ಗೆಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವ ಕಾರ್ಯಕರ್ತರು ಎಲ್ಲ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಲಾದ ಬೆಳಗಾವಿ ನಗರ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು.
‘ಜಿಲ್ಲೆಗಳ ನೂತನ ಅಧ್ಯಕ್ಷರು ತಮ್ಮ ಜಿಲ್ಲೆಗಳ ವ್ಯಾಪ್ತಿಯ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮುಂಬರುವ ಸವಾಲುಗಳು, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಈಗಾಗಲೇ ಚರ್ಚೆ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕರು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ’ ಎಂದು ಹೇಳಿದರು.
‘ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಬೂತ್ ಮಟ್ಟದಿಂದ ಜಿಲ್ಲಾ ತಂಡದ ಪಾತ್ರ ಯಾವ ರೀತಿ ಇರಬೇಕು’ ಎಂದೂ ಹೇಳಿದರು.
ಸಚಿವ ಸತೀಶ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸಾಗರ ದಿವಟಗಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಿಕ್ ಅಂಕಲಗಿ, ಶ್ರೀಧರ ಜಾಧವ, ಸಿದ್ದು ಹಳ್ಳಿಗೌಡ, ಇಮ್ರಾನ್ ಅಂಕಲಗಿ, ನೌಮಾನ್ ಮೊಕಾಶಿ ಹಾಗೂ ಇತರರು ಇದ್ದರು.
ಇದಕ್ಕೂ ಮುನ್ನ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು.
‘ಬಿಜೆಪಿ ಕುತಂತ್ರಗಳಿಗೆ ತಕ್ಕ ಉತ್ತರ’
‘2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಲೋಕಸಭೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಆಡಳಿತಾರೂಢ ಬಿಜೆಪಿಯ ಚುನಾವಣಾ ಅಕ್ರಮಗಳೇ ಪ್ರಮುಖ ಕಾರಣ’ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಆರೋಪಿಸಿದರು. ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ‘ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕರು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಬಿಜೆಪಿಯ ಚುನಾವಣಾ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಡಲಿದ್ದಾರೆ. ಈ ವಿಷಯವನ್ನು ನಾವೆಲ್ಲರೂ ಜನರಿಗೆ ತಲುಪಿಸಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.