ADVERTISEMENT

ದೇಶ ಕಟ್ಟಲು ಯುವಕರ ಸೇವೆ ಅಗತ್ಯ: ಪ್ರೊ.ಬಸವರಾಜ ಪದ್ಮಶಾಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 14:44 IST
Last Updated 18 ಜನವರಿ 2021, 14:44 IST
ಬೆಳಗಾವಿಯ ಆರ್‌ಸಿಯು ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ಈಚೆಗೆ ನಡೆದ ಯುವ ಸಪ್ತಾಹ ಸಂಭ್ರಮ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿದರು
ಬೆಳಗಾವಿಯ ಆರ್‌ಸಿಯು ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ಈಚೆಗೆ ನಡೆದ ಯುವ ಸಪ್ತಾಹ ಸಂಭ್ರಮ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿದರು   

ಬೆಳಗಾವಿ: ‘ದೇಶ ಕಟ್ಟಲು ಯುವಕರ ಸೇವೆ ಅಗತ್ಯ’ ಎಂದು ರಾಣಿ ಚನ್ನಮ್ಮ ವಿಶ‌್ವವಿದ್ಯಾಯದ (ಆರ್‌ಸಿಯು) ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಹೇಳಿದರು.

ಇಲ್ಲಿನ ಆರ್‌ಸಿಯು ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜು ಹಾಗೂ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಯುವ ಸಪ್ತಾಹ ಸಂಭ್ರಮ ಮತ್ತು ರಾಷ್ಟ್ರೀಯ ಯುವ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನ ದೇಹಕ್ಕೆ ಅಂಗಾಗಗಳು ಹೇಗೆ ಮುಖ್ಯವೋ ಹಾಗೆಯೇ ದೇಶ ಕಟ್ಟಲು ಯುವಕರು ಶ್ರಮಿಸುವುದು ಅಗತ್ಯವಾಗಿದೆ. ಭಾರತೀಯರ ಮೇಲೆ ಪರಕೀಯ ದಾಳಿಗಳಾದರೂ ತನ್ನ ಸಂಪ್ರದಾಯವನ್ನು ಇಂದಿಗೂ ಅಚ್ಚಳಿಯದೆ ಉಳಿಸಿಕೊಂಡು ಬರುತ್ತಿರುವುದಕ್ಕೆ ವಿವೇಕಾನಂದರು ಹಾಕಿಕೊಟ್ಟ ದಾರಿಯೆ ಕಾರಣ’ ಎಂದು ನೆನೆದರು.

ADVERTISEMENT

‘ಪರೀಕ್ಷೆ ಪ್ರಮಾಣ ಪತ್ರಗಳಾಚೆ ಯುವಕರು’ ಕುರಿತು ವಿಷಯ ಮಂಡಿಸಿದ ಪ್ರೊ.ಎಸ್. ನಾಯರ್, ‘ಯುವಕರು ಜೀವನದಲ್ಲಿ ಯಶಸ್ಸು ಕಂಡು ಅರ್ಥಪೂರ್ಣ ಜೀವನ ಕ್ರಮ ಅನುಸರಿಸಲು ಆರೋಗ್ಯ, ವಿನಯ, ಗೌರವ, ಸಮತೋಲನ, ಸಂತೋಷ, ಆತ್ಮಸ್ಥೈರ್ಯ, ಸ್ವಯಂ ಅರಿವು ಎಂಬ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿದ ಜಿ.ಎಲ್. ಮಂಜುನಾಥ, ‘ಇಂದು ಕೇವಲ ಪ್ರಮಾಣಪತ್ರ ಹಾಗೂ ಪದವಿ ಪಡೆಯುವುದರಿಂದ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅದು ಶಿಕ್ಷಣದ ಮೂಲ ತತ್ವವಾಗಬೇಕು. ಸೋಲಿನಿಂದಲೂ ಪಾಠ ಕಲಿತು ಯಶಸ್ಸು ಕಾಣಬೇಕು’ ಎಂದರು.

ಡಾ.ಸುಮಂತ ಹಿರೇಮಠ ಮಾತನಾಡಿ, ‘ಇಂದು ಎಷ್ಟೋ ಜನರು ವಾಹನ ಚಾಲನಾ ಪರವಾನಗಿ ಪಡೆದಿದ್ದಾರೆ. ಆದರೆ ವಾಹನ ಚಲಾಯಿಸಲು ಬರುವುದಿಲ್ಲ. ಹೀಗೆ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮಾಣ ಪತ್ರಗಳಿಗಿಂತ ಪ್ರಾಯೋಗಿಕವಾಗಿ ತಾನು ಪಡೆದ ವಿದ್ಯೆ ಬಳಸಿಕೊಂಡು ಜೀವನ ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.

ಡಾ.ಅನಿಲ ಗರಗ, ಸಹನಾ ಕೋಪರ್ಡೆ ಮಾತನಾಡಿದರು.

ಪ್ರಾಚಾರ್ಯ ಡಾ.ಎಂ. ಜಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಯುವ ಸಪ್ತಾಹ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿವೇಕಾನಂದ ಕೇಂದ್ರ ಬೆಳಗಾವಿ ಶಾಖೆ ಮುಖ್ಯಸ್ಥ ಅಶೋಕ ಉಳ್ಳೇಗಡ್ಡಿ, ಸಂಚಾಲಕ ಕಿಶೋರ ಕಾಕ ಇದ್ದರು.

ನಿಖಿಲ್ ನರಗುಂದಕರ ಸ್ವಾಗತಿಸಿದರು. ಅಶೋಕ ಉಳ್ಳೇಗಡ್ಡಿ ಪರಿಚಯಿಸಿದರು. ಡಾ. ಜ್ಯೋತಿ ಪಾಟೀಲ ನಿರೂಪಿಸಿದರು. ಸ್ವಾತಿ ದೀಕ್ಷಿತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.