
ಪ್ರಜಾವಾಣಿ ವಾರ್ತೆ
ಚನ್ನಮ್ಮನ ಕಿತ್ತೂರು: ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ₹2,900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
ತಾಲ್ಲೂಕಿನ ತಿಗಡೊಳ್ಳಿ ಮಾರ್ಗದಲ್ಲಿ ಬರುವ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಇಲಾಖೆಯ ವಾರ್ಷಿಕ ಬಜೆಟ್ ₹4,500 ಕೋಟಿ ಇದೆ. ಈ ವರ್ಗದ ಮಕ್ಕಳೆಲ್ಲರೂ ಶಿಕ್ಷಣವಂತರಾಗಬೇಕೆಂಬ ಉದ್ದೇಶದಿಂದ ವಸತಿ ಶಾಲೆಗಳು ಮತ್ತು ತರಬೇತಿ ಶಿಬಿರಗಳಿಂದ ಇಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ವೆಚ್ಚ ಮಾಡಲಾಗುತ್ತಿದೆ ಎಂದರು.
ಕಳೆದ ಬಾರಿ ಊಟ, ವಸತಿ ಸಹಿತ 400 ಯುವಕರಿಗೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಪರೀಕ್ಷೆಯ ತರಬೇತಿ ಕೊಡಲಾಗಿತ್ತು. ಈ ಬಾರಿ 800 ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳ ಮೈದಾನ ಚಟುವಟಿಕೆ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಶೇಠ್, ಸೇನಾ ಕೇಂದ್ರದ ಮುಖ್ಯಸ್ಥ ನಿವೃತ್ತ ಸೇನಾಧಿಕಾರಿ ಪರ್ವೇಜ್ ಹವಾಲ್ದಾರ್, ಸಯ್ಯದ ಮನ್ಸೂರ, ಬಿ. ಎಸ್. ವೇಂಕಟೇಶ್, ಶರಣಯ್ಯ ಭಂಡಾರಿಮಠ, ಹನೀಫ್ ಸುತಗಟ್ಟಿ, ಆಷ್ಫಾಕ್ ಹವಾಲ್ದಾರ್, ಶಫೀಕ್ ಹವಾಲ್ದಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.