ADVERTISEMENT

ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?

ಇಮಾಮ್‌ಹುಸೇನ್‌ ಗೂಡುನವರ
Published 18 ನವೆಂಬರ್ 2025, 2:20 IST
Last Updated 18 ನವೆಂಬರ್ 2025, 2:20 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಸೋಮವಾರ ಭೇಟಿ ಕೊಟ್ಟು, ಕೃಷ್ಣಮೃಗಗಳ ಸಾವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು   ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಸೋಮವಾರ ಭೇಟಿ ಕೊಟ್ಟು, ಕೃಷ್ಣಮೃಗಗಳ ಸಾವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು   ಪ್ರಜಾವಾಣಿ ಚಿತ್ರ   

ಬೆಳಗಾವಿ: ಸಮೀಪದ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕಷ್ಣಮೃಗಗಳ ಸಾಮೂಹಿಕ ಸಾವು ಸಂಭವಿಸಿ ಐದು ದಿನ ಕಳೆದಿವೆ. ಆದರೂ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಈ ಸಾವು ಏಕೆ ಸಂಭವಿಸಿದೆ ಎಂದು ಅರಿಯಲು ಪ್ರಯೋಗಾಲಯಕ್ಕೆ ಕಳುಹಿಸಿದ ವರದಿ ಇನ್ನೂ ಬಂದಿಲ್ಲ. ಎಲ್ಲರ ಚಿತ್ತವೂ ಈಗ ಅದೇ ವರದಿಯತ್ತ ನೆಟ್ಟಿದೆ. ವರದಿ ಕೈಸೇರಿದರೆ ಸೋಂಕು ಹತೋಟಿ ಸಾಧ್ಯವಾಗಲಿದೆ.

ಕಳೆದ ಗುರುವಾರ (ನ. 13) ಏಕಕಾಲಕ್ಕೆ ಎಂಟು ಕೃಷ್ಣಮೃಗಗಳು ಸಾವನ್ನಪ್ಪಿದವು. ಮೃಗಾಲಯದ ಅಧಿಕಾರಿಗಳು ಅದೇ ದಿನ ಮಾದರಿಗಳನ್ನು ಬನ್ನೇರುಘಟ್ಟ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಅವುಗಳ ತಪಾಸಣೆ ವರದಿ ಬರುವುದು ವಿಳಂಬವಾಗಿದೆ. ಅಲ್ಲಿಯವರೆಗೂ ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಣೆ ನೀಡುವುದನ್ನೇ ಮುಂದುವರಿಸಲಾಗಿದೆ.

‘ಹೆಮೊರೈಸಿಕ್‌ ಸೆಪ್ಟಿಸಿಮಿಯಾ (ಎಚ್‌ಎಸ್‌– ರಕ್ತಸ್ರಾವ ರೋಗ) ಎಂಬ ರೋಗದಿಂದ ಕೃಷ್ಣಮೃಗಗಳು ಸತ್ತ ಅಂದಾಜಿದೆ. ಇದು ಅತ್ಯಂತ ಗಂಭೀರ ಪರಿಣಾಮ ಬೀರುವ ಬ್ಯಾಕ್ಟೀರಿಯಾ. ಸೋಂಕು ತಗಲಿದ 24 ಗಂಟೆಗಳಲ್ಲೇ ಪ್ರಾಣಿಗಳು ಜೀವ ಚೆಲ್ಲುತ್ತವೆ. ಇಂಥದ್ದೇ ಘಟನೆ ಕೆಲವು ವರ್ಷಗಳ ಹಿಂದೆ ಗುಜರಾತ್‌ನ ವಡೋದರಾ ಪ್ರಾಣಿ ಸಂಗ್ರಹಾಲಯದಲ್ಲಿ ಸಂಭವಿಸಿತ್ತು. ಆಗಲೂ ಕೃಷ್ಣಮೃಗಗಳೇ ಸಾಮೂಹಿಕವಾಗಿ ಸಾವನ್ನಪ್ಪಿದ್ದವು. ಆ ಘಟನೆಗೆ ಕಾರಣವಾಗಿದ್ದು ಎಚ್‌ಎಸ್‌ ಬ್ಯಾಕ್ಟೀರಿಯಾ. ಅದೇ ತರಹದ ಲಕ್ಷಣಗಳು ಇಲ್ಲೂ ಕಂಡುಬಂದಿವೆ ಎಂಬುದು ಇಲಾಖೆ ಅಧಿಕಾರಿಗಳ ಮಾಹಿತಿ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್‌, ‘ಪ್ರಯೋಗಾಲಯದಿಂದ ವರದಿ ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರೋಗಾಣು ನಿಯಂತ್ರಣ, ಆ್ಯಂಟಿಬಯಾಟಿಕ್‌, ಚೈತನ್ಯಯುತ ಔಷಧಗಳನ್ನು ನೀಡಲಾಗುತ್ತಿದೆ. ಗುಜರಾತ್‌ನ ವಡೋದರಾದಲ್ಲಿ ಇಂಥದ್ದೇ ಸಮಸ್ಯೆ ಸಂಭವಿಸಿದಾಗ, ಚಿಕಿತ್ಸೆ ನೀಡಿದ್ದ ವೈದ್ಯರನ್ನು ಸಂಪರ್ಕಿಸಿದ್ದೇವೆ. ವಿಡಿಯೊ ಸಂವಾದದ ಮೂಲಕ ಮಾಹಿತಿ ಹಂಚಿಕೊಂಡಿದ್ದೇವೆ. ಅವರ ಸಲಹೆಯಂತೆ ಚಿಕಿತ್ಸೆ ಮುಂದುವರಿದಿದೆ’ ಎಂದರು.

‘ನಾನು ಕೂಡ ಖುದ್ದಾಗಿ ಮೃಗಾಲಯಕ್ಕೆ ಭೇಟಿ ನೀಡಿದ್ದೇನೆ. ಮಂಗಳವಾರ ಮತ್ತೊಮ್ಮೆ ಭೇಟಿ ನೀಡಲಿದ್ದೇನೆ. ಸೋಂಕು ನಿಯಂತ್ರಣಕ್ಕೆ ತರುವ ಎಲ್ಲ ಯತ್ನಗಳೂ ನಡೆದಿವೆ’ ಎಂದರು.

****

ಗುಜರಾತ್‌ನ ವಡೋದರಾದಲ್ಲಿಯೂ ಇಂಥ ಒಂದು ಘಟನೆಯನ್ನು ನಾವು ನೋಡಿದ್ದೇವೆ. ಬೆಳಗಾವಿ ಘಟನೆಯು ಭವಿಷ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ

–ಮಂಜುನಾಥ ಚೌಹಾಣ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಅಳಿವಿನಂಚಿನಲ್ಲಿ ಇರುವ ಕೃಷ್ಣಮೃಗಗಳಂಥ ಪ್ರಬೇಧಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂಖ್ಯೆ ಹೆಚ್ಚಿಸಲು ಮೃಗಾಲಯದಲ್ಲಿ ಇರಿಸಲಾಗಿತ್ತು. ಈ ಘಟನೆ ಶೋಚನೀಯ

–ಕೆ.ರಂಗಸ್ವಾಮಿ ಅಧ್ಯಕ್ಷ ಕರ್ನಾಟಕ ಮೃಗಾಲಯ ಪ್ರಾಧಿಕಾರ

ತುರ್ತು ಸಭೆ ನಡೆಸಿದ ಸಚಿವ

‘ಕೃಷ್ಣಮೃಗಗಳ ನಿಗೂಢ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತಕ್ಷಣವೇ ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ತುರ್ತು ಸಭೆ ನಡೆಸಿ ಪ್ರಕರಣದ ವಿವರ ತಿಳಿದುಕೊಂಡು ಮಾಹಿತಿ ನೀಡಿದರು. ಈ ಕಿರು ಮೃಗಾಲಯ ಯಮಕನಮರಡಿ ವಿಧಾನಭಾ ಕ್ಷೇತ್ರಕ್ಕೇ ಬರುವ ಕಾರಣ ಸಚಿವ ಸತೀಶ ಅವರು ಹೆಚ್ಚು ಕಾಳಜಿ ವಹಿಸಿ ಇದರ ಅಭಿವೃದ್ಧಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.