ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಕನಿಷ್ಠ ವೇತನ ನಿಗದಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 19:50 IST
Last Updated 29 ಜನವರಿ 2013, 19:50 IST
ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ ಸದಸ್ಯರು ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು	-ಪ್ರಜಾವಾಣಿ ಚಿತ್ರ/ ವಿಶ್ವನಾಥ ಸುವರ್ಣ
ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ ಸದಸ್ಯರು ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ವಿಶ್ವನಾಥ ಸುವರ್ಣ   

ಬೆಂಗಳೂರು: ಕನಿಷ್ಠ ವೇತನ ನಿಗದಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರ ರೈಲು ನಿಲ್ದಾಣದಿಂದ ಜಾಥಾ ಹೊರಟ ಪ್ರತಿಭಟನಾಕಾರರು, ಆನಂದರಾವ್ ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಸಾಗಿ ಧರಣಿ ಕುಳಿತರು.

ಒಕ್ಕೂಟದ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ಮಾತನಾಡಿ, `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 1.25 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕ್ರಮವಾಗಿ ರೂ4,500 ಹಾಗೂ ರೂ2,250 ಮಾಸಿಕ ವೇತನ ನಿಗದಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಈ ವೇತನದಿಂದ ಜೀವನ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಕನಿಷ್ಠ ರೂ10,000 ವೇತನ ನಿಗದಿಪಡಿಸಬೇಕು' ಎಂದು ಒತ್ತಾಯಿಸಿದರು.

`ಅಂಗನವಾಡಿ ಕೇಂದ್ರಗಳು ಸಂಜೆ ನಾಲ್ಕು ಗಂಟೆವರೆಗೆ ಕಾರ್ಯ  ನಿರ್ವಹಿಸುತ್ತಿರುವುದರಿಂದ ಮಕ್ಕಳಿಗೆ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಜತೆಗೆ, ದಿನದಲ್ಲಿ ಎರಡು ರೀತಿಯ ಆಹಾರವನ್ನು ನೀಡಬೇಕು. ಪೌಷ್ಠಿಕ ಆಹಾರ ತಯಾರಿಸಲು ಗ್ಯಾಸ್ ಸಿಲಿಂಡರ್, ಸ್ಟೌ ಅಥವಾ ರೂ. 500 ಉರುವಲು ವೆಚ್ಚವನ್ನು ನೀಡಬೇಕು. ಕಡಿಮೆ ತೂಕದ ಮಕ್ಕಳಿಗೆ ಹಾಲು, ಮೊಟ್ಟೆಯನ್ನು ಕಾರ್ಯಕರ್ತೆಯರೇ ಸ್ವಂತ ಹಣದಲ್ಲಿ ತರಿಸಿಕೊಡುತ್ತಿದ್ದಾರೆ. ಈ ಹಣವನ್ನು ಕೂಡಲೇ ಮರು ಪಾವತಿ ಮಾಡಬೇಕು' ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು `ಸಿ' ದರ್ಜೆಯ ನೌಕರರು ಹಾಗೂ ಸಹಾಯಕಿಯರನ್ನು `ಡಿ' ದರ್ಜೆಯ ನೌಕರರೆಂದು ಪರಿಗಣಿಸಿ ಅವರ  ಸೇವೆಯನ್ನು ಕಾಯಂಗೊಳಿಸಬೇಕು. ಜತೆಗೆ ಬೇಸಿಗೆ ರಜೆಯ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

`ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಮೇಶ್ ಜಳಕಿ ಹಾಗೂ ಇಲಾಖೆ ಆಯುಕ್ತ ರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರವೇ ಸಭೆ ಕರೆದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದಾಗಿ ಭರವಸೆ ಕೊಟ್ಟಿದ್ದಾರೆ' ಎಂದು ಒಕ್ಕೂಟದ ಕಾರ್ಯದರ್ಶಿ ಎನ್.ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT