ADVERTISEMENT

ಅಂಚೆ ಕಚೇರಿಯಲ್ಲಿ ಸರ್ವರ್‌ ಡೌನ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 20:02 IST
Last Updated 14 ಮಾರ್ಚ್ 2014, 20:02 IST

ಯಲಹಂಕ: ಇಲ್ಲಿನ ಅಂಚೆ ಕಚೇರಿ­ಯಲ್ಲಿ ಸರ್ವರ್‌ ಡೌನ್‌ ಸಮಸ್ಯೆಯಿಂದ ಕಂಪ್ಯೂಟರ್‌ಗಳು ಕಾರ್ಯ­ನಿರ್ವಹಿಸದ ಪರಿಣಾಮ ಶುಕ್ರವಾರ ಯಾವುದೇ ಕೆಲಸಗಳು ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ರಾಜಾನುಕುಂಟೆ, ಸಿಂಗ ನಾಯಕನಹಳ್ಳಿ, ಅಟ್ಟೂರು, ಅಗ್ರಹಾರ, ಪಾಲನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಈ ಕಚೇರಿಯು ಮುಖ್ಯ ಅಂಚೆ ಕಚೇರಿ­ಯಾಗಿದ್ದು,  ಪ್ರತಿದಿನ ಎಸ್‌ಬಿ ಖಾತೆ, ಆರ್‌ಡಿ, ಮನಿ­ಯಾರ್ಡರ್‌, ವೃದ್ಧಾಪ್ಯ ವೇತನ, ರಿಜಿ­ಸ್ಟರ್‌ ಪೋಸ್‌್ಟ,  ಸ್ಪೀಡ್‌ಪೋಸ್‌್ಟ ಹಾಗೂ ಪಾರ್ಸಲ್‌ ಬುಕ್ಕಿಂಗ್‌ ಸೇರಿ­ದಂತೆ ವಿವಿಧ ಸೌಲಭ್ಯಳನ್ನ ಪಡೆಯಲು ದೂರದ ಊರುಗಳಿಂದ ಸಾರ್ವಜನಿ­ಕರು ಇಲ್ಲಿಗೆ ಬರುತ್ತಾರೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಇದ್ದಕ್ಕಿದ್ದಂತೆ ಸರ್ವರ್‌ ಡೌನ್‌ ಸಮಸ್ಯೆ ತಲೆದೋರಿದ ಪರಿಣಾಮ ಯಾವುದೇ ಕಂಪ್ಯೂಟರ್‌ಗಳು ಕಾರ್ಯ ನಿರ್ವಹಿಸ­ಲಿಲ್ಲ. ಇದರಿಂದ ಹಲವಾರು ಸೇವೆ­ಗಳನ್ನು ಪಡೆಯಲು ಕಚೇರಿಗೆ ಆಗ­ಮಿ­ಸಿದ್ದ ಸಾರ್ವಜನಿಕರು ಮಧ್ಯಾಹ್ನ ಒಂದು ಗಂಟೆಯವರೆಗೆ  ಕಾದರೂ ಕೆಲಸ ಆಗದೆ ಬೇಸರದಿಂದ ಮನೆಗೆ ಹಿಂದಿರುಗಿದರು.

ಬೆಳಗ್ಗೆ 10 ಗಂಟೆಗೆ ಮನಿ­ಯಾ­ರ್ಡರ್‌ ಮಾಡಲು ಹೋದಾಗ, ಅಲ್ಲಿನ ಸಿಬ್ಬಂದಿ ಸರ್ವರ್‌­ಡೌನ್‌ ಆಗಿದೆ ಎಂದು ಹೇಳಿದರು. ಮತ್ತೊಮ್ಮೆ 12 ಗಂಟೆಗೆ ಕಚೇರಿಗೆ ಹೋದಾಗಲೂ ಸಿಬ್ಬಂದಿ ಇದೇ ಕಾರಣ ನೀಡಿದರು. ‘ತಂದೆಗೆ ಇಂದು ತುರ್ತಾಗಿ ಹಣ ಕಳುಹಿಸ­ಬೇಕಾಗಿತ್ತು. ಆದರೆ, ಹಣ ಕಳುಹಿಸಲು ಸಾಧ್ಯವಾಗ­ಲಿಲ್ಲ. ಅಲ್ಲದೆ ಇದರಿಂದ ನನ್ನ ಒಂದು ದಿನದ ಕೆಲಸವೂ ತಪ್ಪಿಹೋಯಿತು’ ಎಂದು ಅಗ್ರಹಾರ ಬಡಾವಣೆ ನಿವಾಸಿ ಅಬ್ದುಲ್‌ ನಜೀರ್‌ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆಯೂ ಒಮ್ಮೆ ಕಚೇರಿಗೆ ಭೇಟಿ ನೀಡಿದ್ದಾಗ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಕಚೇರಿಯಲ್ಲಿ ಬಹಳ ವರ್ಷಗಳಿಂದ ಹಳೆಯ ಕಂಪ್ಯೂಟರ್‌ಗಳನ್ನು ಬಳಸುತ್ತಿರು ವುದರಿಂದ ಪದೇಪದೇ ಇಂತಹ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿ­ಗಳು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿ, ಹಳೆಯ ಕಂಪ್ಯೂಟರ್‌ಗಳನ್ನು ಬದ ಲಾಯಿಸಿ ಹೊಸ ಕಂಪ್ಯೂಟರ್‌ಗಳನ್ನು ಅಳವಡಿಸಿ ಸಾರ್ವಜಜನಿಕರಿಗೆ ಆಗು­ತ್ತಿರುವ ತೊಂದರೆಯನ್ನು ತಪ್ಪಿಸ­ಬೇಕೆಂದು ಅವರು ಒತ್ತಾಯಿಸಿ ದರು.

ಈ ಬಗ್ಗೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ ಯೋಗಾನಂದ್‌ ಅವರನ್ನು ಸಂಪರ್ಕಿಸಿದಾಗ, ‘ಬೆಳಿಗ್ಗೆ 10 ಗಂಟೆಯವರೆಗೆ ಎಂದಿನಂತೆ ಕಾರ್ಯ­ನಿರ್ವಹಿಸ­ಲಾಯಿತು.  ಈ ಸಂದರ್ಭ­ದಲ್ಲಿ ಎಸ್‌ಬಿ ವಹಿವಾಟು ನಡೆಸಲು ಸಾಧ್ಯವಾಯಿತು. ನಂತರ ಸರ್ವರ್‌ ಡೌನ್‌ ಸಮಸ್ಯೆ ಯಿಂದ ಕಂಪ್ಯೂಟರ್‌­ಗಳು ಕಾರ್ಯನಿರ್ವಹಿ­ಸದ ಪರಿಣಾಮ  ರಿಜಿಸ್ಟರ್‌ ಪೋಸ್ಟ್,  ಸ್ಪೀಡ್‌ಪೋಸ್‌್ಟ ಹಾಗೂ ಮನಿಯಾರ್ಡರ್‌ ಸಂಬಂಧಿತ ವ್ಯವಹಾರ­ಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.