ADVERTISEMENT

ಅಂತಿಮ ಮತದಾರರ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:18 IST
Last Updated 28 ಫೆಬ್ರುವರಿ 2018, 20:18 IST
ಅಂತಿಮ ಮತದಾರರ ಪಟ್ಟಿ ಪ್ರಕಟ
ಅಂತಿಮ ಮತದಾರರ ಪಟ್ಟಿ ಪ್ರಕಟ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಬುಧವಾರ ಪ್ರಕಟವಾಗಿದೆ. 3,16,467 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.

ವಿಧಾನಸಭಾ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ನೋಂದಣಾಧಿಕಾರಿ ಕಚೇರಿ ಹಾಗೂ ವಾರ್ಡ್‌ ಕಚೇರಿಗಳಲ್ಲಿ ಪಟ್ಟಿ ಪ್ರಕಟಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಮತ್ತು ಚುನಾವಣಾಧಿಕಾರಿ ಎನ್‌.ಮಂಜುನಾಥ್‌ ಪ್ರಸಾದ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕ್ಷೇತ್ರಗಳ ಸರಾಸರಿ ಲಿಂಗಾನುಪಾತ 921 ಇದೆ. 2017ರ ನವೆಂಬರ್‌ 31ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ ಲಿಂಗಾನುಪಾತ ಶೇ 2.08ರಷ್ಟು ಏರಿಕೆಯಾಗಿದೆ. ಜನಸಂಖ್ಯೆಗೆ ಹೋಲಿಸಿದರೆ ಮತದಾರರ ಅನುಪಾತ ಶೇ 66.84ರಷ್ಟಿದೆ ಎಂದರು.

ADVERTISEMENT

‘ಹೊಸ ಸೇರ್ಪಡೆ, ಹೆಸರು ಕೈಬಿಡಲು, ತಿದ್ದುಪಡಿ ಹಾಗೂ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ ಸೇರಿ ಒಟ್ಟು 5,37,717 ಅರ್ಜಿ ಬಂದಿದ್ದವು. ಇದರಲ್ಲಿ 4,66,809 ಅರ್ಜಿ ಸ್ವೀಕೃತಗೊಂಡಿದ್ದು, 70,908 ಅರ್ಜಿ ತಿರಸ್ಕರಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಎಲ್ಲ ಮತದಾರರಿಗೆ ಉಚಿತವಾಗಿ ಮತದಾನ ಗುರುತಿನ ಚೀಟಿಯನ್ನು (ಎಪಿಕ್‌ ಕಾರ್ಡ್‌) ಮಾರ್ಚ್‌ 10ರಿಂದ 15ರೊಳಗಾಗಿ ಮನೆಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು' ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 7,259 ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 1,028 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 1,400ಕ್ಕಿಂತ ಅಧಿಕ ಮತದಾರರಿರುವ ಕಡೆಗಳಲ್ಲಿ ಆಕ್ಸಿಲರಿ ಮತಗಟ್ಟೆ ತೆರೆಯಲಾಗುವುದು. ದೈಹಿಕ ಅಶಕ್ತರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸಲು ಅವರಿಗೆ ನೆರವಾಗಲು ಚುನಾವಣಾ ಆಯೋಗವೇ ವ್ಯವಸ್ಥೆ ಮಾಡಲಿದೆ. ಅಲ್ಲದೆ, ಮತದಾರರ ಗುರುತಿನ ಚೀಟಿ ಸಂಖ್ಯೆ ನೋಂದಾಯಿಸಿ ಮತಗಟ್ಟೆಯ ವಿಳಾಸ ಪಡೆಯುವಂತಹ ಆ್ಯಪ್‌ ಅನ್ನು ಪಾಲಿಕೆಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು.

ಗುಜರಾತ್‌, ಉತ್ತರಪ್ರದೇಶ ಹಾಗೂ ಜಾರ್ಖಂಡ್‌ ರಾಜ್ಯಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಈಗಾಗಲೇ 2,000 ವಿದ್ಯುನ್ಮಾನ ಮತಯಂತ್ರಗಳು ಬಂದಿವೆ. ಮಾರ್ಚ್‌ 5ರಿಂದ ಮೊದಲ ಹಂತದ ಪರಿಶೀಲನೆ ಆರಂಭವಾಗಲಿದೆ. ಅಲ್ಲದೆ, ಈ ಬಾರಿ ಎಲ್ಲ ಮತಗಟ್ಟೆಗಳಿಗೂ ವಿವಿಪ್ಯಾಟ್‌ (VVPAT–voter verifiable paper audit trail) ಬಳಸಲಾಗುತ್ತಿದೆ ಎಂದರು.

‘ಚುನಾವಣೆಗೆ 55,000 ಸಿಬ್ಬಂದಿ ಅಗತ್ಯವಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಸಿಬ್ಬಂದಿಯ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಚುನಾವಣಾ ದಿನಾಂಕ ಘೋಷಣೆಯಾದ 24 ಗಂಟೆಯೊಳಗೆ ನಗರದಲ್ಲಿ ಒಂದೇ ಒಂದು ಬ್ಯಾನರ್‌, ಪೋಸ್ಟರ್‌ ಇರದಂತೆ ಕಾರ್ಯಾಚರಣೆ ನಡೆಸಲಾಗುವುದು. ಅನುಮತಿ ಇಲ್ಲದೆ ಮತ್ತು ಆಯೋಗದ ಗಮನಕ್ಕೆ ತಾರದೆ ಯಾವುದೇ ಕರಪತ್ರ, ಬಂಟಿಂಗ್ಸ್‌, ಪೋಸ್ಟರ್‌ ಮುದ್ರಿಸದಂತೆ ಮುದ್ರಣಕಾರರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗುವುದು’ ಎಂದರು.

ಕಳೆದ ವಿಧಾನಸಭೆ ಚುನಾವಣೆಗೆ ಶೇ 54.2 ಮತ್ತು ಲೋಕಸಭೆ ಚುನಾವಣೆಗೆ ಶೇ 52.04 ಮತದಾನವಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ಮುಂದಿನ ಎರಡು ತಿಂಗಳಲ್ಲಿ ಇನ್ನಷ್ಟು ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.