ADVERTISEMENT

ಅಂಧರಿಗಾಗಿ ಕೇಳುವ ನಾಟಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಬೆಂಗಳೂರು: ಆರು ವರ್ಷದ ಬಾಲಕ ಧನಂಜಯ್‌ಗೆ ಅದು ಮರೆಯಲಾಗದ ಅನುಭವ. ಇದೇ ಮೊದಲ ಬಾರಿಗೆ ಆತ ನಾಟಕವೊಂದನ್ನು `ಕೇಳಿದ್ದ~. `ಮೊದಲು ದಿಗಿಲುಗೊಂಡನಾದರೂ ನಂತರ ನಾಟಕವನ್ನು ಆಸ್ವಾದಿಸಿದ~ ಎಂದು ದೃಷ್ಟಿ ಮಾಂದ್ಯತೆ ಹೊಂದಿರುವ ಬಾಲಕನ ತಾಯಿ ಮುನಿರಾಜಮ್ಮ ತಿಳಿಸಿದರು. ಧನಂಜಯನಂತಹ 40ಕ್ಕೂ ಹೆಚ್ಚು ಅಂಧ ಮಕ್ಕಳು ಅಲ್ಲಿದ್ದರು, ಮೊದಲ ಬಾರಿಗೆ ನಾಟಕವನ್ನು ಆಲಿಸುವ ಅವಕಾಶ ಪಡೆದಿದ್ದರು.

ಅಂಧರೇ ಅಭಿನಯಿಸಿದ ಆ ನಾಟಕ ಕೇವಲ ಮಕ್ಕಳಿಗೆ ಮಾತ್ರವಲ್ಲದೇ ಪೋಷಕರನ್ನೂ ಸೆಳೆಯಿತು. ಯುವರ್ಸ್‌ ಟ್ರೂಲಿ ರಂಗತಂಡ ನಾಲ್ವರು ಅಂಧ ಮಕ್ಕಳು ಅಂಧ ಗಿಟಾರ್‌ವಾದಕರೊಂದಿಗೆ ನಾಟಕ ಪ್ರದರ್ಶಿಸಿದರು.
 
ವಿಶ್ವ ಅಂಧತ್ವ ದಿನದ ಅಂಗವಾಗಿ ದೃಷ್ಟಿದೋಷದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ರಂಗ ತಂಡ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ನಾಟಕವನ್ನು ಪ್ರದರ್ಶಿಸಿತು.

ಒಟ್ಟ ನಾಲ್ಕು ಅಂಕಗಳಲ್ಲಿ ನಾಟಕ ಪ್ರದರ್ಶನಗೊಂಡಿತು. ನಾಟಕದ ಕೊನೆಯ ಭಾಗದಲ್ಲಿ ಪ್ರೇಕ್ಷಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಜೀವನ ಕೌಶಲ್ಯದ ಬಗ್ಗೆ ನಾಟಕದ ಮೂಲಕ ಮಕ್ಕಳಿಗೆ ಅರಿವು ಮೂಡಿಸಲಾಯಿತು.

ವೈದ್ಯರನ್ನೂ ಕೂಡ ನಾಟಕ ಕಾಡಿತು. ನಾಟಕದ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯ ಡಾ. ಕೌಶಿಕ್ ಮುರಳಿ, `ನಾಟಕ ವೈದ್ಯರ ಕಣ್ಣನ್ನೂ ತೆರೆಸುವಂತಿತ್ತು. ಮಾನವೀಯ ನೆಲೆಯಿಂದ ನಾಟಕ ತನ್ನ ಉತ್ತುಂಗ ಸ್ಥಿತಿ ತಲುಪುತ್ತದೆ. ಇದನ್ನು ಆಸ್ಪತ್ರೆಯಲ್ಲಿಯೂ ಪ್ರದರ್ಶಿಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.