ADVERTISEMENT

ಅಕ್ರಮ ಒತ್ತುವರಿ: ಕಾರ್ಯಪಡೆಗೆ ನೋಟಿಸ್ ನೀಡುವ ಅಧಿಕಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಬೆಂಗಳೂರು: ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ಜಾಗ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸುವ ಕ್ರಮವನ್ನು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮ ಸಮರ್ಥಿಸಿಕೊಂಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಅಕ್ರಮ ಒತ್ತುವರಿ ಕಟ್ಟಡ ಹಾಗೂ ನಿಯಮ ಉಲ್ಲಂಘನೆ~ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ನಿಯಮ ಉಲ್ಲಂಘಿಸಿದ ಮನೆ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡುವ ಅಧಿಕಾರ ಬಿಎಂಟಿಎಫ್‌ಗೆ ಇದೆ. ಕಾನೂನು ಪ್ರಕಾರವೇ ನೋಟಿಸ್ ನೀಡುವುದನ್ನು ಮುಂದುವರಿಸುತ್ತೇನೆ~ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಆರೋಪ ಮಾಡಿದ ಪಾಲಿಕೆ ಸದಸ್ಯರ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಸೇರಿದಂತೆ ಕೆಲ ಸದಸ್ಯರು ನಿಯಮ ಉಲ್ಲಂಘಿಸಿರುವ ಕಟ್ಟಡ ಮಾಲೀಕರ ವಿರುದ್ಧ ನೋಟಿಸ್ ಜಾರಿಗೊಳಿಸುವ ಆರ್.ಪಿ. ಶರ್ಮ ಅವರ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ನಿಯಮ ಉಲ್ಲಂಘಿಸುವ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿರುವ ಶರ್ಮ ಪಾಲಿಕೆ ಸದಸ್ಯರ ವಿರುದ್ಧ ಸೆಡ್ಡು ಹೊಡೆದಿದ್ದಾರೆ.

`ಕೆಎಂಸಿ ಕಾಯ್ದೆ 321ರ ಪ್ರಕಾರ, ಲಭ್ಯವಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೋಟಿಸ್ ನೀಡುತ್ತಿದ್ದೇನೆ. ಈ ಹಿಂದಿನ ಪಾಲಿಕೆ ಆಯುಕ್ತ ಭರತ್‌ಲಾಲ್ ಮೀನಾ ಅವರ ನಿಯಮ ಉಲ್ಲಂಘಿಸಿದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು~ ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್ ಕೂಡ ಎರಡು ವಿವಿಧ ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲು ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಧಿಕಾರಕ್ಕೆ ಅವಕಾಶ ನೀಡಿದೆ ಎಂದು  ತಿಳಿಸಿದರು.
1999ರಿಂದ 2011ರವರೆಗೆ ಇಂತಹ 32 ಪ್ರಕರಣಗಳು ದಾಖಲಾಗಿದ್ದವು.

ನನ್ನ ಅವಧಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರು ನೀಡಿದ 28 ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿದೆ ಎಂದು ಶರ್ಮ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.