ADVERTISEMENT

ಅಕ್ರಮ ಕೇಬಲ್‌ ಅಳವಡಿಕೆ: ಪರಿಶೀಲನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:52 IST
Last Updated 18 ಸೆಪ್ಟೆಂಬರ್ 2013, 19:52 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ದೂರವಾಣಿ ಕಂಪೆನಿಗಳ ಕೇಬಲ್‌ ಅಳವಡಿಕೆ ಅಕ್ರಮಗಳಿಗೆ ಸಂಬಂಧಿ­ಸಿ­ದಂತೆ ಬಂದ ದೂರುಗಳನ್ನು ಪರಾಮರ್ಶಿಸಿ ವರದಿ ನೀಡಲು ಆರು ಜನ ಸದಸ್ಯರ ಸಮಿತಿಯನ್ನು ರಚಿಸಲು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ತೀರ್ಮಾನಿಸಿದ್ದಾರೆ.

ಬುಧವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಬಿಜೆಪಿ ಸದಸ್ಯ ಎನ್‌.ಆರ್‌. ರಮೇಶ್‌ ಪ್ರಸ್ತಾಪಿಸಿದ ವಿಷಯದ ಮೇಲೆ ಚರ್ಚೆ ನಡೆದ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದರು. ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ತಲಾ ಒಬ್ಬರು ಸಮಿತಿ ಸದಸ್ಯರಾಗಿ ಇರಲಿದ್ದು, ಆಯುಕ್ತರ ತಾಂತ್ರಿಕ ತನಿಖಾ ಕೋಶದ (ಟಿವಿಸಿಸಿ) ಮುಖ್ಯಸ್ಥರೂ ಸಮಿತಿಯಲ್ಲಿ ಇರಲಿದ್ದಾರೆ. ತಿಂಗಳಾಂತ್ಯದ ಒಳಗೆ ಸಮಿತಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿಸಿದರು.

ಖಾಸಗಿ ದೂರವಾಣಿ ಕಂಪೆನಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇಬಲ್‌ ಅಳವಡಿಕೆ ಮಾಡಿಕೊಂಡಿದ್ದು, ಅವರಿಂದ ಭೂಬಾಡಿಗೆ ಆಕರಿಸಲು ಅವಕಾಶ ಇದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡರೆ ಕೋಟ್ಯಂತರ ವರಮಾನವೂ ಬರಲಿದೆ. ಆದರೆ, ಅವ್ಯವಹಾರಗಳಿಂದ ಆದಾಯ ಸೋರಿಕೆ ಆಗುತ್ತಿದೆ. ದೂರವಾಣಿ ಕಂಪೆನಿ­ಗಳು ಬಿಬಿಎಂಪಿಗೆ ತಪ್ಪು ಮಾಹಿತಿ ನೀಡು­ತ್ತಿವೆ ಎಂದು ರಮೇಶ್‌ ದೂರಿ­ದರು.

‘ದುರಸ್ತಿಗೆ ಮುಂಗಡವಾಗಿ ಹಣ ಠೇವಣಿ ಇಡದೆ ಕೇಬಲ್‌ ಅಳವಡಿಸಲು ರಸ್ತೆಗಳನ್ನು ಅಗೆಯಲಾಗುತ್ತಿದೆ. ಬಿಬಿ­ಎಂಪಿ­ಯಿಂದ ಅನುಮತಿ ಪಡೆಯದೆ ಕೇಬಲ್‌ ಹಾಕಲಾಗುತ್ತಿದೆ’ ಎಂದು ಹೇಳಿ­ದರು. ‘ಅಧಿಕಾರಿಗಳು ಹಣ ಪಡೆದು, ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ’ ಎಂದೂ ಆರೋಪಿಸಿದರು.

ಆದ್ಯತೆ ಮೇರೆಗೆ ಕಾಮಗಾರಿ: ತಡೆಹಿಡಿದ ಎಲ್ಲ ಕಾಮಗಾರಿಗಳನ್ನೂ ಸಾರಾ­ಸಗ­ಟಾಗಿ ಪುನರಾರಂಭಿಸಲು ಆಗದು. ಕಾಮ­­ಗಾರಿಗಳ ಅಗತ್ಯ, ಹಣ­ಕಾಸಿನ ಲಭ್ಯತೆ ಆಧಾರದ ಮೇಲೆ ತಡೆ­ಯಾಜ್ಞೆ ತೆರವುಗೊಳಿಸುವ ಕುರಿತು ಯೋಚಿ­ಸ­ಲಾಗುವುದು ಎಂದು ಆಯುಕ್ತ ಎಂ.ಲಕ್ಷ್ಮಿನಾರಾಯಣ ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ನಾಯಕ ಎನ್‌. ನಾಗರಾಜ್‌, ವಿರೋಧ ಪಕ್ಷದ ನಾಯಕ ಬಿ.ಎನ್‌.ಮಂಜುನಾಥ್‌ ರೆಡ್ಡಿ, ಜೆಡಿಎಸ್‌ ನಾಯಕ ಆರ್‌. ಪ್ರಕಾಶ್‌ ಮತ್ತಿತರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ‘ವಾರ್ಡ್‌ನಲ್ಲಿ ಕೆಲಸ­ಗಳು ಅರ್ಧಕ್ಕೆ ನಿಂತಿವೆ. ಜನರಿಗೆ ಏನು ಉತ್ತರ ಹೇಳುವುದು ತಿಳಿಯದಾಗಿದೆ. ಕೂಡಲೇ ತಡೆಹಿಡಿದ ಕಾಮಗಾರಿ­ಗಳನ್ನು ಪುನರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಮಾರ್ಗ ಅಳವಡಿಕೆ ಕಾಮಗಾರಿ ನಡೆಸುತ್ತ ನಗರದ ರಸ್ತೆಗಳನ್ನು ಹಾಳು ಮಾಡಲಾಗುತ್ತಿದ್ದು, ಅದನ್ನು ತಪ್ಪಿಸ­ಬೇಕು’ ಎಂದು ಬಿಜೆಪಿಯ ಹರೀಶ್‌ ಆಗ್ರಹಿ­ಸಿದರು. ‘ಕೆಪಿಟಿಸಿಎಲ್‌, ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ಸಂಬಂಧಿಸಿದ ಎಲ್ಲ ಸಂಸ್ಥೆಗಳ ಮುಖ್ಯಸ್ಥರ ಜತೆ ಶೀಘ್ರವೇ ಸಭೆ ನಡೆಸಿ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಕೊಳವೆ ಬಾವಿಗಳಿಗೆ ಮತ್ತೆ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಮಾಡಲಾಗು­ವುದು’ ಎಂದು ಮೇಯರ್‌ ಹೇಳಿದರು.

‘ಪ್ರತಿ ವಾರ ಒಂದೊಂದು ವಿಭಾಗದಲ್ಲಿ ಕಡತ ವಿಲೇವಾರಿ ಸಭೆ ನಡೆಸಲಾಗುವುದು. ಸಂಬಂಧಿಸಿದ ಎಲ್ಲ ಅಧಿಕಾರಿಗಳು, ವಾರ್ಡ್‌ ಸದಸ್ಯರು, ಆಯುಕ್ತರಲ್ಲದೆ ನಾನೂ ಆ ಸಭೆಯಲ್ಲಿ ಹಾಜರರಿಲಿದ್ದೇನೆ’ ಎಂದು ಅವರು ತಿಳಿಸಿದರು. ‘ಪ್ರತಿ ಶನಿವಾರ ಲಾಟರಿ ಎತ್ತುವ ಮೂಲಕ ಒಂದೊಂದು ವಾರ್ಡ್‌ನಲ್ಲಿ ಸ್ವಚ್ಛತಾ ಆಂದೋಲನ ನಡೆಸಲಾಗುವುದು’ ಎಂದು ಭರವಸೆ ನೀಡಿ­ದರು. ವೈದ್ಯಕೀಯ ಪರಿಹಾರ ನಿಧಿ­ಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.

‘ಬಿಬಿಎಂಪಿ ಕೇವಲ ಕಸ ಗುಡಿಸುವ ಕೆಲಸ ಮಾಡುವಲ್ಲಿ ಅರ್ಥವಿಲ್ಲ. ತ್ಯಾಜ್ಯ ವಿಲೇವಾರಿ ಬಿಬಿಎಂಪಿ ಜವಾಬ್ದಾರಿಯಾದರೂ ನಾಗರಿಕರಿಗೆ ಅವರ ಹೊಣೆಯ ಬಗೆಗೆ ಜಾಗೃತಿ ಮೂಡಿಸಬೇಕು’ ಎಂದು ಬಿಜೆಪಿಯ ಬಿ.ವಿ. ಗಣೇಶ್‌ ಸಲಹೆ ನೀಡಿದರು. ಕಾಲಮಿತಿಯಲ್ಲಿ ಕೆಲಸಗಳು ಆಗಬೇಕು ಮತ್ತು ಚುಕ್ಕೆ ಗುರುತಿನ ಪ್ರಶ್ನೆ ಕೇಳುವ ಸಂಪ್ರದಾಯವನ್ನು ಮತ್ತೆ ಆರಂಭಿಸಬೇಕು ಎನ್ನುವ ಸಲಹೆಗಳು ಸದಸ್ಯರಿಂದ ಕೇಳಿಬಂದವು.

ಮಂಜುನಾಥ್‌ ರೆಡ್ಡಿ ಅಧಿಕಾರ ಸ್ವೀಕಾರ
ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‌ನ ಮಡಿವಾಳ ವಾರ್ಡ್‌ ಸದಸ್ಯ ಬಿ.ಎನ್‌. ಮಂಜುನಾಥ್‌ ರೆಡ್ಡಿ ಬುಧವಾರ ಅಧಿಕಾರ ಸ್ವೀಕರಿಸಿದರು. ರೆಡ್ಡಿ ಅವರ ನೇಮಕವನ್ನು ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಪ್ರಕಟಿಸಿದರು. ಇದುವರೆಗೆ ಎಂ.ಕೆ. ಗುಣಶೇಖರ್‌ ವಿರೋಧ ಪಕ್ಷದ ನಾಯಕರಾಗಿದ್ದರು.

ಪ್ರತಿ ಕಚೇರಿಯಲ್ಲಿ ಪೂಜೆ ಭರಾಟೆ
ಮಂಗಳವಾರವಷ್ಟೇ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಆಯ್ಕೆಗೊಂಡವರು ಬುಧವಾರ ತಮ್ಮ ಕಚೇರಿಗಳಲ್ಲಿ ಪೂಜೆ ನೆರವೇರಿಸಿದರು. ಕಚೇರಿ ಬಾಗಿಲುಗಳಿಗೆ ಹೂವಿನ ಹಾರಗಳಿಂದ ಸಿಂಗರಿಸಲಾಗಿತ್ತು. ಪೂಜೆ ಅಬ್ಬರ ಜೋರಾಗಿತ್ತು. ಒಂದೊಂದು ಕಚೇರಿಯಿಂದಲೂ ಗಂಟೆ ನಾದ ಮೊಳಗುತ್ತಿತ್ತು. ಎಲ್ಲ ಸದಸ್ಯರು ಪೂಜಾ ವಿಧಿ–ವಿಧಾನಗಳಲ್ಲಿ ಪಾಲ್ಗೊಂಡಿದ್ದರಿಂದ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಭೆ, 11.50ಕ್ಕೆ ಶುರುವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.