ADVERTISEMENT

ಅಕ್ಷಯ ತೃತೀಯ ಒಡವೆಗಳಿಗೆ ಭಾರಿ ರಿಯಾಯಿತಿ

ಬಂಗಾರ ಖರೀದಿಗೆ ಬಗೆ ಬಗೆಯ ಬಹುಮಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:19 IST
Last Updated 14 ಏಪ್ರಿಲ್ 2018, 19:19 IST
ಒಡವೆ
ಒಡವೆ   

ಬೆಂಗಳೂರು: ಅಕ್ಷಯ ತೃತೀಯ ಸಮೀಪಿಸುತ್ತಿದೆ. ಇದೇ 18ರಂದು ಇಷ್ಟದ ಒಡವೆ ಖರೀದಿಸುವವರಿಗೆ ಭಾರಿ ರಿಯಾಯಿತಿ ಹಾಗೂ ಬಹುಮಾನಗಳನ್ನು ನೀಡಲು ಆಭರಣ ಮಳಿಗೆಗಳು ಮುಂದಾಗಿವೆ.

ಚಿನ್ನ ಮತ್ತು ವಜ್ರದ ಆಭರಣಗಳ ಮಾರಾಟ ಮಳಿಗೆಗಳು, ಪ್ರತಿ ಗ್ರಾಂ ಬಂಗಾರ ಖರೀದಿಯ ಮೇಲೆ ₹ 100 ರಿಯಾಯಿತಿ, ಉಚಿತ ಚಿನ್ನದ ನಾಣ್ಯ, ವೇಸ್ಟೇಜ್‌ನಲ್ಲಿ ಶೇ 25ರಷ್ಟು ರಿಯಾಯಿತಿ, ಚಿನ್ನದ ವಿನಿಮಯಕ್ಕೆ ಶೇ 100ರಷ್ಟು ಬೆಲೆ ಖಾತರಿ ನೀಡಲು ಮುಂದಾಗಿವೆ.

ಕಲ್ಯಾಣ್‌ ಜ್ಯುವೆಲ್ಲರಿ ಮಳಿಗೆಗಳಲ್ಲಿ ಚಿನ್ನ ಖರೀದಿಸುವವರು ಮರ್ಸಿಡಿಸ್‌ ಬೆಂಜ್‌ ಕಾರನ್ನು ಗೆಲ್ಲಬಹುದು. ಈ ಅವಕಾಶ ಜೂನ್‌ 9ರವರೆಗೆ ಇರಲಿದೆ.

ADVERTISEMENT

ಲಲಿತಾ ಜ್ಯುವೆಲ್ಲರಿ ಮಳಿಗೆಯವರು ಮೌಲ್ಯವರ್ಧಿತ ಶುಲ್ಕಗಳಲ್ಲಿ ಶೇ 1ರಷ್ಟು ರಿಯಾಯಿತಿ ನೀಡಲಿದ್ದಾರೆ. ಜಾಯ್‌ ಆಲುಕ್ಕಾಸ್‌ನವರು ವಜ್ರದ ಆಭರಣಗಳ ಮೇಲೆ ಶೇ 20ರಷ್ಟು ರಿಯಾಯಿತಿ ಪ್ರಕಟಿಸಿದ್ದಾರೆ. ಟಾಟಾ ಬಳಗದ ‘ತನಿಷ್ಕ್‌’ ಮಳಿಗೆಯವರು ಏಪ್ರಿಲ್‌ 18ರವರೆಗೆ ಚಿನ್ನ ಹಾಗೂ ವಜ್ರದ ಆಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ 25ರಷ್ಟು ರಿಯಾಯಿತಿ ನೀಡಲಿದ್ದಾರೆ. ಚಿನ್ನದ ಒಡವೆಗಳ ವಿನಿಮಯಕ್ಕೆ ಶೇ 100ರಷ್ಟು ಮೌಲ್ಯ ಪಡೆಯುವ ಅವಕಾಶ ಒದಗಿಸಿದ್ದಾರೆ.

ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌.ಕಲ್ಯಾಣ್‌ರಾಮನ್‌, ‘ನಮ್ಮ ಮಳಿಗೆಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಆರಂಭಿಸಿದ್ದೇವೆ.

ಗ್ರಾಹಕರು ತಮ್ಮ ಇಷ್ಟದ ಒಡವೆಯನ್ನು ಗುರುತಿಸಬಹುದು. ಅಕ್ಷಯ ತೃತೀಯ ದಿನ ಅದರ ಬೆಲೆಯನ್ನು ಪಾವತಿಸಿ ಅದನ್ನು ಪಡೆದುಕೊಂಡು ಹೋಗಬಹುದು’ ಎಂದರು. ರಿಲಯನ್ಸ್‌ ಜ್ಯುವೆಲ್ಸ್‌ ಏಪ್ರಿಲ್‌ 10ರಿಂದ 22ರವರೆಗೆ ಎರಡು ವಾರಗಳ ಕಾಲ ವಿಶೇಷ ಉತ್ಸವವನ್ನು ಏರ್ಪಡಿಸಿದೆ. ಈ ಅವಧಿಯಲ್ಲಿ ಆಭರಣ ಖರೀದಿಸುವವರಿಗೆ ತಯಾರಿಕಾ ವೆಚ್ಚದ ಮೇಲೆ ಶೇ 40ರಷ್ಟು ರಿಯಾಯಿತಿ ಹಾಗೂ ಚಿನ್ನದ ನಾಣ್ಯಗಳನ್ನು ಖರೀದಿಸುವವರಿಗೆ ಅದರ ತಯಾರಿಕಾ ವೆಚ್ಚದ ಮೇಲೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ.

ನಗರದಲ್ಲಿ ಶನಿವಾರ ಚಿನ್ನದ (ಸ್ಟ್ಯಾಂಡರ್ಡ್‌) ಬೆಲೆ ಪ್ರತಿ 10 ಗ್ರಾಂಗೆ  (ಶೇ 99.5 ಶುದ್ಧತೆ) ₹ 31,310 ಇತ್ತು. ಒಡವೆ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹ 2928 ಇತ್ತು.

**

ವಜ್ರಾಭರಣ ಖರೀದಿಗೆ ಒಲವು ಹೆಚ್ಚಳ

‘ಚಿನ್ನದ ಬೆಲೆ ಹೆಚ್ಚಳವಾಗಿರುವುದರಿಂದ ಗ್ರಾಹಕರು ವಜ್ರದ ಆಭರಣ ಖರೀದಿಗೆ ಒಲವು ತೋರಿಸುತ್ತಿದ್ದಾರೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅಕ್ಷಯ ತೃತೀಯ ವೇಳೆ ಚಿನ್ನಕ್ಕಿಂತ ವಜ್ರಾಭರಣ ಖರೀದಿ ಭರಾಟೆಯೇ ಜೋರಾಗಲಿದೆ. ಪೋಲ್ಕಿ ಹಾಗೂ ಜಾಡಾವು ಒಡವೆಗಳಿಗೆ ಬೇಡಿಕೆ ಹೆಚ್ಚಲಿದೆ’ ಎಂದು ಕಾಶಿ ಜ್ಯುವೆಲ್ಲರಿ ಮಳಿಗೆಯ ಉಪಾಧ್ಯಕ್ಷ ಹಾಗೂ ಪಾಲುದಾರ ಶ್ರೇಯಾಂಶ್‌ ಕಪೂರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.