ADVERTISEMENT

ಅಟಲ್ ಬಿಹಾರಿ ವಾಜಪೇಯಿ ಕಪ್:ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಬೊಮ್ಮನಹಳ್ಳಿ: ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ `ಅಟಲ್ ಬಿಹಾರಿ ವಾಜಪೇಯಿ ಕಪ್~ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಏ. 5ರಿಂದ 8ರವರೆಗೆ ಬಿಳೆಕಹಳ್ಳಿಯ ವಿಜಯಾ ಬ್ಯಾಂಕ್ ಬಡಾವಣೆಯ ಬಿಬಿಎಂ ಮೈದಾನದಲ್ಲಿ ಏರ್ಪಡಿಸಲಾಗಿದೆ.

ಕ್ರೀಡಾಂಗಣದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪಂದ್ಯಾವಳಿಯ ರೂವಾರಿ ಬಿ.ವೈ.ರಮೇಶ್, ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದ್ದು, ಆರು ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕುಳಿತು ಪಂದ್ಯಾವಳಿ ವೀಕ್ಷಿಸಲು ಸುಸಜ್ಜಿತ ಗ್ಯಾಲರಿ ನಿರ್ಮಿಸಲಾಗಿದೆ ಎಂದರು.

ರಾಜ್ಯದ ಪ್ರಮುಖ ತಂಡಗಳಾದ ಎಚ್‌ಎಎಲ್, ಬಿಎಸ್‌ಎನ್‌ಎಲ್, ಎಂಇಜಿ, ಎಎಸ್‌ಡಿ, ಸಿಎಎಲ್, ವಿಜಯಾ ಬ್ಯಾಂಕ್ ತಂಡಗಳಲ್ಲದೆ, ವಿವಿಧ ಜಿಲ್ಲೆಗಳಿಂದ 38ಕ್ಕೂ ಹೆಚ್ಚು ಪುರುಷರ ತಂಡಗಳು ಭಾಗವಹಿಸಲಿವೆ. ಅಲ್ಲದೆ, ಬೆಂಗಳೂರಿನ ಮಾತಾ ತಂಡ, ಮೂಡಬಿದರೆಯ ಆಳ್ವಾಸ್, ಪುತ್ತೂರಿನ ಸೇಂಟ್ ಫಿಲೋಮಿನಾ ತಂಡಗಳೂ ಸೇರಿದಂತೆ ಆರಕ್ಕೂ ಅಧಿಕ ಮಹಿಳಾ ತಂಡಗಳು ಭಾಗವಹಿಸುತ್ತಿವೆ. ಆಟಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಹುಮಾನದ ವಿವರ: ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರಥಮ ಬಹುಮಾನವಾಗಿ ತಲಾ ರೂ. 50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 15 ಸಾವಿರ ನಗದು ಮತ್ತು ಆಕರ್ಷಕ ಅಟಲ್ ಬಿಹಾರಿ ವಾಜಪೇಯಿ ಕಪ್ ನೀಡಲಾಗುವುದು ಎಂದರು.

ಶಾಸಕ ಎಂ.ಸತೀಶ್‌ರೆಡ್ಡಿ ಹಾಗೂ ನಟ ಅಂಬರೀಷ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಸಚಿವರಾದ ಆರ್. ಅಶೋಕ, ಬಿ.ಎನ್. ಬಚ್ಚೇಗೌಡ, ರಾಜ್ಯ ಕಬಡ್ಡಿ ಮಂಡಳಿ ಅಧ್ಯಕ್ಷ ಎಂ.ಹನುಮಂತೇಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.