ADVERTISEMENT

ಅಡುಗೆ ಕಾರ್ಮಿಕರ ಬೇಡಿಕೆ ಈಡೇರಿಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಬೆಂಗಳೂರು:`ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಅಧ್ಯಯನ ನಡೆಸಿ 15 ದಿನದೊಳಗೆ ಈಡೇರಿಸುವ ಪ್ರಯತ್ನ ಮಾಡಲಾಗುವುದು~ ಎಂದು ಮುಖ್ಯಮಂತ್ರಿ .ಡಿ.ವಿ.ಸದಾನಂದಗೌಡ ಇಲ್ಲಿ ಭರವಸೆ ನೀಡಿದರು.

ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ರಾಯ ರಾಯ ರಾಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಅಸಂಘಟಿತ ಕಾರ್ಮಿಕ ವಲಯದ ವ್ಯಾಪ್ತಿಗೆ ಬರುವ ಈ ಕಾರ್ಮಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಷ್ಟೇ ಬೇಡಿಕೆ ಪಟ್ಟಿ ನೀಡಿದ್ದೀರಿ. ಬೇಡಿಕೆಯಲ್ಲಿನ ಯಾವ ಅಂಶಗಳಿವೆ ಎಂಬುದನ್ನು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಈ ಕುರಿತು ಸಚಿವ ಬಿ.ಎನ್.ಬಚ್ಚೇಗೌಡ ಅವರೊಂದಿಗೆ ಚರ್ಚಿಸಿ ಶೀಘ್ರಮುಖ್ಯ ಬೇಡಿಕೆಈಡೇರಿಸಲಾಗುವುದು~ ಎಂದು ಆಶ್ವಾಸನೆ ನೀಡಿದರು.

ಕಾರ್ಮಿಕರ ಕಲ್ಯಾಣ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ರೂ 30 ಸಾವಿರಗಳವರೆಗೆ ವೈದ್ಯಕೀಯ ಸೌಲಭ್ಯ ಸಹ ನೀಡಲಾಗುತ್ತಿದೆ.

ನೂತನ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಸುಮಾರು 4 ಲಕ್ಷ ಕಾರ್ಮಿಕರನ್ನು ಈ ವ್ಯಾಪ್ತಿಗೆ ಒಳಪಡಿಸುವ ಕಾರ್ಯ ನಡೆಯುತ್ತಿದ್ದು, ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಅಂತಃಕರಣ ಸಾಕ್ಷಿಯಾಗಿ ಪ್ರಯತ್ನಿಸಲಿದೆ~ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವ ಬಿ.ಎನ್.ಬಚ್ಚೇಗೌಡ, `ಸ್ವಾತಂತ್ರ್ಯ ನಂತರದ ಯಾವ ಸರ್ಕಾರಗಳೂ ಅಸಂಘಟಿತ ಕಾರ್ಮಿಕರ ಬಗ್ಗೆ ಚಿಂತನೆ ನಡೆಸಿಲ್ಲ.
 
ದೇಶದಲ್ಲಿ ಶೇ 8ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಹಾಗೂ ಶೇ 92ರಷ್ಟು ಕಾರ್ಮಿಕರು ಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದಿಂದ ಅಗತ್ಯ ಸೌಕರ್ಯ ದೊರೆಯುತ್ತಿಲ್ಲ~ ಎಂದು ವಿಷಾದಿಸಿದರು.

ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ 2008ರಲ್ಲಿ ಮಸೂದೆ ಜಾರಿ ಮಾಡಿತ್ತು. ಇದರ ರೂಪು ರೇಷೆಗಳನ್ನು ರಚಿಸಲು ಆಯಾ ರಾಜ್ಯಗಳಿಗೆ ಆದೇಶಿಸಿತ್ತು. ಮುಂದಿನ ದಿನಗಳಲ್ಲಿ ಅಗತ್ಯ ಕಾನೂನು ರಚಿಸಿ ಕಾರ್ಮಿಕರ ಭದ್ರತೆಗೆ ಆದ್ಯತೆ ನೀಡಲಾಗುವುದು~ ಎಂದರು.

ವ್ಯಾಪ್ತಿಗೆ ಸೇರ್ಪಡೆ: ಹೋಟೆಲ್ ಕಾರ್ಮಿಕರ ವ್ಯಾಪ್ತಿಗೆ ಅಡುಗೆ ಕೆಲಸಗಾರರು ಹಾಗೂ ಸಹಾಯಕ ಕಾರ್ಮಿಕರನ್ನು ಒಳಪಡಿಸಲಾಗುವುದು. ಈ ಕಾರ್ಮಿಕರಿಗಾಗಿ ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವಾರ್ಷಿಕವಾಗಿ ಪಿಂಚಣಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಕೋರ್ಸ್ ಆರಂಭ: ಅಡುಗೆ ಹಾಗೂ ಕೇಟರಿಂಗ್ ತರಬೇತಿ ನೀಡಲು ರಾಜ್ಯದ ಪ್ರಮುಖ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಮುಂದಿನ ವರ್ಷದಿಂದ ನೂತನ ಕೋರ್ಸ್‌ಗಳನ್ನು ಪ್ರಾರಂಭಿಲಾಗುವುದು. ಇದರಿಂದ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.

ಅಡುಗೆ ಕೆಲಸಗಾರರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಸೌಲಭ್ಯಗಳನ್ನು ನೀಡುವುದು, ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನಗಳನ್ನು ಕಲ್ಪಿಸುವುದು, ಸರ್ಕಾರದ ವಿವಿಧ ಇಲಾಖೆಗಳಿಗೆ ಅಡುಗೆ ಕಾರ್ಮಿಕರನ್ನು ನೇಮಕಮಾಡುವಾಗ  ವೃತ್ತಿ ನಿರತ ಅಡುಗೆ ಕಾರ್ಮಿಕರಿಗೆ ಆದ್ಯತೆ ನೀಡುವುದು ಸೇರಿದಂತೆ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಸಚಿವ ಬಚ್ಚೇಗೌಡ ಹಾಗೂ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಸಲ್ಲಿಸಲಾಯಿತು. ಇದೇ ವೇಳೆ 50 ಮಂದಿ ಉತ್ತಮ ಅಡುಗೆ ತಯಾರಕರಿಗೆ ನಳಪಾಕ ಪ್ರವೀಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಸಿ.ಟಿ.ರವಿ ಅವರು ಅನ್ನಪೂರ್ಣೇಶ್ವರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ,ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ವಾಸುದೇವ ಅಡಿಗ, ಉದ್ಯಮಿ ಟಿ.ಎ.ಶರವಣ, ಪಾಲಿಕೆ ಸದಸ್ಯರಾದ ಅನಿಲ್‌ಕುಮಾರ್, ಸತ್ಯನಾರಾಯಣ, ಸಂಘದ ಅಧ್ಯಕ್ಷ ಎಚ್.ವಿ.ನಾಗರಾಜ್, ಕಾರ್ಯಾಧ್ಯಕ್ಷ ಬಿ.ಎಸ್.ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.

ಗೌಡರ ಚಟಾಕಿ...
ಕಾರ್ಯಕ್ರಮದ ನಿರೂಪಕರು `ಮುಖ್ಯಮಂತ್ರಿ ಗದ್ದುಗೆ ಏರಿ ಹಾರಾಡುತ್ತಿರುವ ಸದಾನಂದಗೌಡರು ಸಭೆ ಉದ್ದೇಶಿಸಿ  ಮಾತನಾಡಬೇಕು~ ಆಹ್ವಾನಿಸಿದರು. ನಗುವಿನಿಂದಲೇ ಭಾಷಣ ಪ್ರಾರಂಭಿಸಿದ  ಗೌಡರು `ನಾನು ಮುಖ್ಯಮಂತ್ರಿಯಾಗಿರುವುದು ವಿಮಾನದಲ್ಲಿ ಹಾರಾಟ ಮಾಡಲಿಕ್ಕಲ್ಲ. ಅಥವಾ ಗರುಡನ ಹಾಗೇ ಆಕಾಶದಲ್ಲಿ ವಿಹರಿಸಲೂ ಅಲ್ಲ. ಸದಾ ನಿಮ್ಮಂದಿಗೆ ಸೇವೆ ಮಾಡಲು ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.