ಬೆಂಗಳೂರು: ಮದ್ಯಪಾನ ಮಾಡಿದ್ದ ಚಾಲಕ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಒಂಬತ್ತು ಬೈಕ್‌ಗಳು ಮತ್ತು ಎರಡು ಕಾರುಗಳಿಗೆ ಹಾನಿ ಮಾಡಿದ ಘಟನೆ ಬಸವನಗುಡಿ ಸಂಚಾರ ಠಾಣೆ ವ್ಯಾಪ್ತಿಯ ಲಕ್ಷ್ಮೀಪುರದ 7ನೇ ಅಡ್ಡರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಚಾಲಕ ಮಂಜುನಾಥ್‌ನನ್ನು(22) ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಸ್ವಿಫ್ಟ್ ಕಾರಿನಲ್ಲಿ ಬಸವನಗುಡಿಯ ಗವಿಪುರ ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಕಡೆಯಿಂದ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ವೇಳೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಹಲವು ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಿಂದ ಹಲವು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
`ಸಾಮಾನ್ಯವಾಗಿ ಈ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಆದರೆ, ಘಟನೆ ನಡೆದ ಸಮಯದಲ್ಲಿ ಅದೃಷ್ಟವಶಾತ್ ಮಕ್ಕಳ್ಯಾರೂ ರಸ್ತೆಯಲ್ಲಿರಲಿಲ್ಲ. ನೋಡು ನೋಡುತ್ತಿದ್ದಂತೇ ಕಾರು ರಸ್ತೆ ಬದಿಯ ಒಂದು ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಬೈಕ್‌ಗಳ ಕಡೆಗೆ ನುಗ್ಗಿತು~ ಎಂದು ಸ್ಥಳೀಯ ನಿವಾಸಿ ಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.
ಘಟನೆಯ ನಂತರ ಸ್ಥಳೀಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಸವನಗುಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.