ADVERTISEMENT

ಅತ್ಯಾಚಾರ: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:23 IST
Last Updated 26 ಏಪ್ರಿಲ್ 2018, 19:23 IST

ಬೆಂಗಳೂರು: ಸ್ನೇಹಿತೆಯ ಮೊದಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಎರಡನೇ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿ ಶಕ್ತಿವೇಲು (32) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹6,500 ದಂಡ ವಿಧಿಸಿ ನಗರದ 55ನೇ ಸಿಟಿ ಸಿವಿಲ್‌ ನ್ಯಾಯಾಲಯ ಗುರುವಾರ ಆದೇಶಿಸಿದೆ.

2017ರ ಮೇ 3ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವನಮಾಲಾ ಯಾದವ್‌, ಈ ಆದೇಶ ಹೊರಡಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎನ್‌.ಹಿರೇಮನಿ ವಾದಿಸಿದ್ದರು.

‘ಸಂತ್ರಸ್ತರಿಬ್ಬರ ತಾಯಿ, ಶ್ರೀರಾಮಪುರದ ನಿವಾಸಿ. ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಯಶವಂತಪುರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಶಕ್ತಿವೇಲು, ತಾಯಿಗೆ ಪರಿಚಯವಾಗಿದ್ದ. ನಂತರ, ಸ್ನೇಹ ಬೆಳೆಸಿದ್ದ. ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಒಂದೇ ಮನೆಯಲ್ಲಿ ವಾಸವಿದ್ದರು’ ಎಂದು ಹಿರೇಮನಿ ತಿಳಿಸಿದರು.

ADVERTISEMENT

‘ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಯ ತಂಗಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆವೊಡ್ಡುತ್ತಿದ್ದ’

‘ಅಪರಾಧಿಯ ಕಿರುಕುಳ ಹೆಚ್ಚುತ್ತಿದ್ದಂತೆ ಇಬ್ಬರೂ ಬಾಲಕಿಯರು ತಾಯಿಗೆ ವಿಷಯ ತಿಳಿಸಿದ್ದರು. ತಾಯಿಯೇ ಠಾಣೆಗೆ ಹೋಗಿ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀರಾಮಪುರ ಪೊಲೀಸರು, ಶಕ್ತಿವೇಲುನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಹಿರೇಮನಿ ವಿವರಿಸಿದರು.

₹4 ಲಕ್ಷ ಪರಿಹಾರ: ಪ್ರಕರಣದ ಸಂತ್ರಸ್ತರಿಗೆ ₹4 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿದೆ.

‘ಮೊದಲ ಸಂತ್ರಸ್ತೆಗೆ ₹2.5 ಲಕ್ಷ ಹಾಗೂ ಎರಡನೇ ಸಂತ್ರಸ್ತೆಗೆ ₹1.50 ಲಕ್ಷ ನೀಡಲು ನ್ಯಾಯಾಲಯ ಹೇಳಿದೆ. ಆರೋಪಿಯು ಪಾವತಿಸುವ ದಂಡದ ಮೊತ್ತದಲ್ಲಿ ₹5,000 ಸಂತ್ರಸ್ತರಿಗೆ ಸೇರಲಿದೆ. ಇಷ್ಟು ಮೊತ್ತದ ಪರಿಹಾರ ನೀಡಿರುವುದು ಇದೇ ಮೊದಲು’ ಎಂದು ಹಿರೇಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.