ADVERTISEMENT

ಅಧಿಕ ಬಡ್ಡಿ ವಸೂಲಿ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಬೆಂಗಳೂರು: ಸಾರ್ವಜನಿಕರಿಗೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಮೂರು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಿಂಡ್ಲು ಗ್ರಾಮದ ಕೆ.ಎ.ಬೇಬಿ (46), ವಯ್ಯಾಲಿಕಾವಲ್‌ನ ಬಾಬು ಉರುಫ್ ರಮೇಶ್ ಬಾಬು (48) ಮತ್ತು ಹೆಬ್ಬಾಳದ ಚಂದ್ರಶೇಖರ್ (40) ಬಂಧಿತರು.

ಆರೋಪಿಗಳು ಕಾನೂನು ಮೀರಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದವು. ಈ ದೂರುಗಳನ್ನು ಆಧರಿಸಿ ಪ್ಯಾಲೇಸ್ ಗುಟ್ಟಹಳ್ಳಿಯ ನಾಲ್ಕನೇ ಮುಖ್ಯರಸ್ತೆಯ ಬೆಸ್ಟ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ ಮೇಲೆ ದಾಳಿ ನಡೆಸಿ ಮೂರೂ ಮಂದಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲಗಾರರ ಸಹಿ ಇರುವ ಖಾಲಿ ಛಾಪಾ ಕಾಗದಗಳು, ಚೆಕ್‌ಗಳು, ಪ್ರಾಮಿಸರಿ ನೋಟ್‌ಗಳು, ದ್ವಿಚಕ್ರ ವಾಹನಗಳ ದಾಖಲೆ ಪತ್ರಗಳು, ಎರಡು ದ್ವಿಚಕ್ರ ವಾಹನ ಮತ್ತು ಮೂರು ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತುರ್ತಾಗಿ ಹಣ ಬೇಕಾದವರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಆರೋಪಿಗಳು ಸಾಲ ನೀಡುತ್ತಿದ್ದರು. ತಿಂಗಳಿಗೆ ಶೇ 10ರಿಂದ 15 ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಹಣ ನೀಡದವರಿಗೆ ಬೆದರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಾಧ ವಿಭಾಗದ ಡಿಸಿಪಿ ಡಿ.ಎಂ.ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ ಎಸಿಪಿ ಎಚ್.ಎಸ್.ದುಗ್ಗಪ್ಪ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.