ADVERTISEMENT

ಅಧ್ಯಕ್ಷರ, ಸದಸ್ಯರ ಕಡೆಗಣನೆ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 18:30 IST
Last Updated 10 ಜುಲೈ 2012, 18:30 IST

ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಕಡೆಗಣಿಸಿ ಅಧಿಕಾರಿಗಳೇ ಕಾನೂನು ಬಾಹಿರವಾಗಿ ಫಲಾನುಭವಿ ಅಲ್ಲದವರಿಗೆ ಹಕ್ಕು ಪತ್ರ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಆರೋಪಿಸಿದರು.

ನಗರದಲ್ಲಿ ಮಂಗಳವಾರ ನಡೆದ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ತಾಲ್ಲೂಕು ಜಾಗೃತಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರದೇ ಮಹಾದೇವಪುರ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ 1600ಕ್ಕೂ ಅಧಿಕ ಹಕ್ಕು ಪತ್ರಗಳನ್ನು ವಿತರಣೆ ಮಾಡಿದ್ದಾರೆ. ಅವರನ್ನು ಈ ಕೂಡಲೇ ಅಮಾನತುಗೊಳಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ರಾವ್, `ಹಕ್ಕು ಪತ್ರಗಳ ವಿತರಣೆ ಮತ್ತು ಅಕ್ರಮ ಮನೆಗಳ ಮಾರಾಟ ಕುರಿತು ಮಾಹಿತಿ ಪಡೆದುಕೊಂಡು, ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಯಾನಂದ `ಗ್ರಾಮ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಪಂಚಾಯತ್ ಸಂಪೂರ್ಣವಾಗಿ ವಿಫಲಗೊಂಡಿದೆ.

ಶಿಕ್ಷಣ, ಆರೋಗ್ಯದಂತಹ ಪ್ರಮುಖ ವಲಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಕಾರ್ಯಕ್ರಮ ರೂಪಿಸಿ ಪ್ರಸ್ತಾವನೆ ತಂದರೆ, ಪರಿಷತ್ ಸದಸ್ಯರ ಅನುದಾನದಲ್ಲಿ ಸಹಾಯ ಮಾಡಲು ಸಿದ್ಧ~ ಎಂದರು.

ಬಜೆಟ್ ಮಂಡನೆ: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿನ ಅಧ್ಯಕ್ಷ ಸಿ.ಮರಿಯಪ್ಪ ಅವರು 2012-13ನೇ ಸಾಲಿನ 695.79 ಕೋಟಿ ರೂಪಾಯಿ ಬಜೆಟ್ ಮಂಡಿಸಿದರು. ಯೋಜನಾ ಕಾರ್ಯಕ್ರಮಗಳಿಗೆ 173.30 ಕೋಟಿ ರೂಪಾಯಿ ಹಾಗೂ ಯೋಜನೇತರ ಕಾರ್ಯಕ್ರಮಗಳಿಗೆ 522.49 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಯಿತು.

ಇದಲ್ಲದೆ 13ನೇ ಹಣಕಾಸು ಯೋಜನೆಯಲ್ಲಿ ರಸ್ತೆಯ ಅಭಿವೃದ್ಧಿಗಾಗಿ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸರಬರಾಜಿಗೆ ಒಟ್ಟು 38.30 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಕುಡಿಯುವ ನೀರಿನ ಕಾಮಗಾರಿಗೆ  36.42 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಈ ಅನುದಾನದಿಂದ 722 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ರೂ 5.93 ಕೋಟಿ ಮುಂದುವರೆದ ಕಾಮಗಾರಿಗಳಿಗೆ ಹಾಗೂ 29.84 ಕೋಟಿ ರೂಪಾಯಿಯನ್ನು ಹೊಸ ಕಾಮಗಾರಿಗಳಿಗೆ ಮತ್ತು ಶಾಲೆಗಳಿಗೆ ಕುಡಿಯುವ ನೀರು ಒದಗಿಸಲು ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷೆ  ಸರ್ವಮಂಗಳ ಕೃಷ್ಣಪ್ಪ, ಉಪಕಾರ್ಯದರ್ಶಿ ಶಿವಲಿಂಗಯ್ಯ, ಮುಖ್ಯ ಯೋಜನಾಧಿಕಾರಿ  ಕೆಂಪಣ್ಣ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.