ಬೆಂಗಳೂರು: ನಗರದ ಲಾಲ್‌ಬಾಗ್ ರಸ್ತೆಯ `ಪಜಲ್ಸ್ ಮಡ್ ಪ್ಲಸ್~ ಅನಧಿಕೃತ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರ ಸಹಾಯದಿಂದ ಬುಧವಾರ ದಾಳಿ ನಡೆಸಿರುವ ಪಾಲಿಕೆಯ ದಕ್ಷಿಣ ವಲಯದ ಆರೋಗ್ಯ ಪರಿವೀಕ್ಷಕರ ತಂಡ, ಏಳು ಹುಕ್ಕಾ ಬಾಟಲಿ ಹಾಗೂ 17 ಹುಕ್ಕಾ ಕೊಳವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಲಿಕೆ ಸಿಬ್ಬಂದಿಯು ದಾಳಿ ನಡೆಸಲು ಮುಂದಾದ ಸಂದರ್ಭದಲ್ಲಿ ಗಲಾಟೆ ಮಾಡಿದ ಉದ್ದಿಮೆಯ ಮಾಲೀಕರ ಪುತ್ರ ಹಾಗೂ ಅವರ ಅನುಯಾಯಿಗಳು ಕೆಲಕಾಲ ಸಿಬ್ಬಂದಿಯನ್ನು ಗೇಟಿನ ಆವರಣದಲ್ಲಿ ಅಕ್ರಮ `ಬಂಧನ~ದಲ್ಲಿರಿಸಿಕೊಂಡಿದ್ದರು.
ಆನಂತರ ಪೊಲೀಸರ ಸಹಾಯದಿಂದ `ಬಂಧಿ~ಯಾಗಿದ್ದ ಪಾಲಿಕೆ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ದೃಶ್ಯ ಚಿತ್ರೀಕರಿಸದಂತೆ ಕ್ಯಾಮೆರಾ ಹೊತ್ತ ಮಾಧ್ಯಮ ಛಾಯಾಗ್ರಾಹಕರನ್ನು ತಳ್ಳಿದ ಪಾರ್ಲರ್ ಸಿಬ್ಬಂದಿ, ಆರೋಗ್ಯ ಪರಿವೀಕ್ಷಕರನ್ನು `ಬಂಧಿ~ಯಾಗಿರಿಸಿಕೊಂಡರು.
ಉದ್ದಿಮೆ ತಪಾಸಣೆಗೆ ಅಡಚಣೆ ಉಂಟು ಮಾಡಿದ ಹಾಗೂ ಪಾಲಿಕೆ ಸಿಬ್ಬಂದಿಯನ್ನು ಗೇಟಿನ ಆವರಣದಲ್ಲಿ `ಬಂಧಿ~ಯಾಗಿ ಹಿಡಿದಿಟ್ಟುಕೊಂಡ ಆರೋಪದ ಮೇರೆಗೆ ಉದ್ದಿಮೆ ಮಾಲೀಕರ ಪುತ್ರನ ವಿರುದ್ಧ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಎಂ.ಎನ್. ಲೋಕೇಶ್ ತಿಳಿಸಿದ್ದಾರೆ.
ತಿಂಡಿ-ತಿನಿಸುಗಳನ್ನು ಮಾರಾಟ ಮಾಡಲು ಪರವಾನಗಿ ಪಡೆದಿದ್ದ ಈ ಪಾರ್ಲರ್‌ನಲ್ಲಿ ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಮಧ್ಯಾಹ್ನ 1.30ರ ಸಮಯದಲ್ಲಿ ಪಾಲಿಕೆ ಸಿಬ್ಬಂದಿ ಈ ದಾಳಿ ನಡೆಸಿದ್ದರು.
ಇತ್ತೀಚೆಗೆ ನಗರದ ರೆಸಿಡೆನ್ಸಿ ರಸ್ತೆಯ ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್‌ನ ಮೇಲೆ ದಾಳಿ ನಡೆಸಿದ್ದರು.
ಮಹಾನಗರಪಾಲಿಕೆ ಸಿಬ್ಬಂದಿಗಳು 18 ವರ್ಷದೊಳಗಿನ ಶಾಲಾ ಮಕ್ಕಳು ಹುಕ್ಕಾ ಸೇವನೆಯಲ್ಲಿ ತೊಡಗಿದ್ದನ್ನು ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.