ADVERTISEMENT

ಅಪಘಾತ: ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಬಿಇ ವಿದ್ಯಾರ್ಥಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಸುಮ್ಮನಹಳ್ಳಿ ಸರ್ವಿಸ್ ರಸ್ತೆಯ ಕೈವಲ್ಯಧಾಮ ಬಳಿ ನಿಲ್ಲಿಸಿದ್ದ ಲಾರಿಗೆ ಬೈಕ್ ಗುದ್ದಿಸಿದ ಪರಿಣಾಮ ರಾಕೇಶ್ (19) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಲಗ್ಗೆರೆ ನಿವಾಸಿ ಕೆಂಪಯ್ಯ ಅವರ ಮಗನಾದ ರಾಕೇಶ್, ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಬಿಇ ವಾಸಂಗ ಮಾಡುತ್ತಿದ್ದ. ಕೆಂಪಯ್ಯ ಆಟೊ ಚಾಲಕರಾಗಿದ್ದಾರೆ. ರಾತ್ರಿ 7.30ರ ಸುಮಾರಿಗೆ ರಾಕೇಶ್, ಬೈಕ್‌ನಲ್ಲಿ ಟ್ಯೂಷನ್‌ಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ವೇಗವಾಗಿ ಬೈಕ್ ಓಡಿಸುತ್ತಿದ್ದ ಆತ, ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಹೀಗಾಗಿ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಆತನ ತಲೆಗೆ ತೀವ್ರತರದ ಪೆಟ್ಟು ಬಿದ್ದಿದೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಆತ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣ: ಸುಮನಹಳ್ಳಿ ಬಳಿಯ ಮಾಳಗಾಳ ಸರ್ವಿಸ್ ರಸ್ತೆಯಲ್ಲಿ ಬೈಕ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ರವಿಶಂಕರ್ (45) ಎಂಬುವರು ಸಾವನ್ನಪ್ಪಿದ್ದಾರೆ.

ವೃಷಭಾವತಿನಗರ ನಿವಾಸಿಯಾದ ರವಿಶಂಕರ್, ಮಾರತ್ತಹಳ್ಳಿಯಲ್ಲಿರುವ ರಾಜರಾಜೇಶ್ವರಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹೋಗುವಾಗ ನಿಯಂತ್ರಣ ತಪ್ಪಿ ಬಿದ್ದರು. ತಲೆಗೆ ಪೆಟ್ಟಾದ ಕಾರಣ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.

ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಈ ಎರಡೂ ಪ್ರಕರಣಗಳು ದಾಖಲಾಗಿವೆ. ಮೇಲಿನ ಎರಡೂ ಘಟನೆಯಲ್ಲಿ ಚಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಎಂದು ಪೊಲೀಸರು ಮಾಹಿತಿ ನೀಡಿದರು.
ಬಂಧನ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರ ಪೊಲೀಸರು ರೌಡಿ ಅನಿಲ್ ಕುಮಾರ್ (29) ಎಂಬಾತನನ್ನು ಬಂಧಿಸಿದ್ದಾರೆ.

ದೇವಸಂದ್ರದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ರವಿ ಎಂಬುವರ ಮೇಲೆ ಒಂದು ತಿಂಗಳ ಹಿಂದೆ ಅನಿಲ್ ಹಲ್ಲೆ ನಡೆಸಿದ್ದ. ಈ ಸಂಬಂಧ ರವಿ ನೀಡಿದ್ದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. 2005ರಲ್ಲಿ ನಡೆದ ಉದ್ಯಮಿ ದಯಾನಂದ ಬಾಬು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅನಿಲ್, ಆರು ವರ್ಷಗಳ ಶಿಕ್ಷೆ ಅನುಭವಿಸಿ ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ. ಆತನ ವಿರುದ್ಧ ಕೆ.ಆರ್.ಪುರ, ಬೈಯಪ್ಪನಹಳ್ಳಿ, ಕಮರ್ಷಿಯಲ್ ಸ್ಟ್ರೀಟ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಲಾರಿ ಬಿದ್ದು ಚಾಲಕ ಸಾವು:  ಸಿಮೆಂಟ್ ಮಿಕ್ಸರ್ ಲಾರಿಯೊಂದು ನಾಗರಬಾವಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕ ರವಿಕೌಟಿ (25) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಲೀನರ್ ಶಿವಮೂರ್ತಿ (20) ಗಂಭೀರ ಗಾಯಗೊಂಡಿದ್ದಾನೆ.

ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರವಿಕೌಟಿ ಮತ್ತು ಶಿವಮೂರ್ತಿ ಮೂಲತಃ ಹಿರಿಯೂರಿನವರು. ಬಳ್ಳಾರಿಯಿಂದ ಬಂದಿದ್ದ ಲಾರಿ, ರಾತ್ರಿ 8.30ರ ಸುಮಾರಿಗೆ ಸುಮನಹಳ್ಳಿ ಜಂಕ್ಷನ್‌ನಿಂದ ಮೈಸೂರು ರಸ್ತೆ ಕಡೆಗೆ ಹೋಗುತ್ತಿತ್ತು. ಈ ವೇಳೆ ಟೈರ್ ಪಂಕ್ಚರ್ ಆದ ಕಾರಣ ಚಾಲಕ ನಿಯಂತ್ರಣ ಕಳದುಕೊಂಡಿದ್ದಾನೆ. ಹೀಗಾಗಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು 40 ಅಡಿ ಎತ್ತರದಿಂದ ಸರ್ವಿಸ್ ರಸ್ತೆಗೆ ಬಿದ್ದಿದೆ.

ಚಾಲಕನ ಶವವನ್ನು ಕ್ರೇನ್ ಬಳಸಿ ಹೊರ ತೆಗೆಯಲಾಯಿತು. ಶುಕ್ರವಾರ ಅದನ್ನು ತೆರವುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.