ADVERTISEMENT

ಅಪಘಾತ- ವ್ಯಕ್ತಿ ಸಾವು: ಸ್ಥಳೀಯರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 20:05 IST
Last Updated 15 ಜನವರಿ 2012, 20:05 IST

ಬೆಂಗಳೂರು: ಹಳೆ ಮದ್ರಾಸ್ ರಸ್ತೆಯ ತಾಮರೈ ಕಣ್ಣನ್ ಜಂಕ್ಷನ್ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದರಿಂದ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಅಮೃತಹಳ್ಳಿಯ ಎಂ.ಕೃಷ್ಣ (41) ಮೃತಪಟ್ಟಿದ್ದು, ಮರ್ಫಿ ಟೌನ್‌ನ ಜಯರಾಮ್ (56) ಮತ್ತು ಕೋರಮಂಗಲದ ಜಾರ್ಜ್ (58) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಸ್ನೇಹಿತರಾದ ಜಯರಾಮ್ ಮತ್ತು ಜಾರ್ಜ್ ಅವರು ತಮ್ಮ ಸ್ನೇಹಿತನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದ್ವಿಚಕ್ರ ವಾಹನದಲ್ಲಿ ಲಿಂಗರಾಜಪುರಕ್ಕೆ ಹೋಗಿದ್ದರು. ರಾತ್ರಿ 8.30ರ ಸುಮಾರಿಗೆ ಮದುವೆ ಸಮಾರಂಭದಿಂದ ಮನೆಗೆ ವಾಪಸ್ ಬರುತ್ತಿದ್ದ ಅವರು ತಾಮರೈ ಕಣ್ಣನ್ ಜಂಕ್ಷನ್ ಬಳಿ ಬಲ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಹಳೆ ಮದ್ರಾಸ್‌ರಸ್ತೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಕೃಷ್ಣ, ಅವರಿಗೆ ಡಿಕ್ಕಿ ಹೊಡೆದರು. 
 

 ಇದರಿಂದಾಗಿ ಮೂವರು ಕೆಳಗೆ ಬಿದ್ದಿದ್ದಾರೆ. ಹಿಂದಿನಿಂದ ಬಂದ ವಾಹನವೊಂದು ಕೃಷ್ಣ ಅವರ ತಲೆ ಮೇಲೆ ಹರಿದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಮೂವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಕೃಷ್ಣ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಭಾರತೀಯ ಭೂಸರ್ವೇಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಾರ್ಜ್ ಹಾಗೂ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಯರಾಮ್ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾವಿಗೆ ಕಾರಣವಾದ ವಾಹನ ಯಾವುದು ಎಂದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದರು. ಹಲಸೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯರ ಪ್ರತಿಭಟನೆ: ಘಟನೆಯ ಹಿನ್ನೆಲೆಯಲ್ಲಿ ಉದ್ರಿಕ್ತರಾದ ಸ್ಥಳೀಯರು ರಸ್ತೆ ತಡೆ ಮಾಡಿ ಪ್ರತಿಭಟನೆ
ನಡೆಸಿದ್ದರಿಂದ ಸ್ಥಳದಲ್ಲಿ ಭಾನುವಾರ ರಾತ್ರಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಮರೈ ಕಣ್ಣನ್ ಜಂಕ್ಷನ್ ಬಳಿ ಸಂಚಾರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸದ ಕಾರಣ ಹಾಗೂ ಸಿಗ್ನಲ್ ದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿ ಶೀಘ್ರವೇ ಈ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಈ ರಸ್ತೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್)ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಹಳೆ ಮದ್ರಾಸ್ ರಸ್ತೆ, ಹಲಸೂರು ಕೆರೆ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಪರಿಣಾಮ ವಾಹನ ದಟ್ಟಣೆ ಹೆಚ್ಚಿ ಸಾರ್ವಜನಿಕರು ಪರದಾಡುವಂತಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸ್ ಸಿಬ್ಬಂದಿ ಜತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾನಿರತರ ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT